ಲಕ್ನೋ, ನ.22 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಜೊತೆಯಾಗಿ ನಡೆಯುತ್ತಾ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರ ಹೆಗಲ ಮೇಲೆ ಕೈಹಾಕಿ ಏನೋ ಹೇಳುತ್ತಿರುವ ಫೋಟೋಗಳಿವು. ಒಂದು ಫೋಟೋವನ್ನು ಎದುರಿನಿಂದ ಕ್ಲಿಕ್ಕಿಸಿದರೆ, ಇನ್ನೊಂದನ್ನು ಹಿಂಬದಿಯಿಂದ ತೆಗೆಯಲಾಗಿದೆ. ಒಟ್ಟಿನಲ್ಲಿ ಇವು ಅಪರೂಪದ ಫೋಟೋಗಳಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.
ಯೋಗಿ ಆದಿತ್ಯನಾಥ್ ಈ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ನವಭಾರತ ನಿರ್ಮಾಣಕ್ಕೆ ಬದ್ದರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕವಿತೆಯೊಂದನ್ನು ಬರೆದಿರುವ ಅವರು, "ಪ್ರತಿಜ್ಞೆಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನಮ್ಮ ತನು-ಮನವನ್ನು ಅರ್ಪಿಸಲು ನಾವು ತೀರ್ಮಾನಿಸಿದ್ದೇವೆ. ಆಕಾಶದೆತ್ತರಕ್ಕೆ ಹೋಗಲು ಹಾಗೂ ನವಭಾರತ ನಿರ್ಮಾಣ ಮಾಡಲು" ಎಂದು ಬರೆದುಕೊಂಡಿದ್ಧಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ವ್ಯತ್ಯಾಸವನ್ನು ಗುರುತಿಸುವಂತೆ ಜನರನ್ನು ಕೇಳಿದ್ದಾರೆ.
ಯೋಗಿ ಆದಿತ್ಯನಾಥ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್, "ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಹೆಗಲ ಮೇಲೆ ಕೈ ಹಾಕಿದವರೇ ಕತ್ತಿ ಮಸೆಯಲೂಬಹುದು" ಎಂದಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇದ್ದು, ಬಿಜೆಪಿ ವರಿಷ್ಠರಿಗೆ ಈ ಚುನಾಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರು ಜೊತೆಯಾಗಿ ನಡೆಯುತ್ತಾ ಮಾತನಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.