ಮುಜಫರ್ನಗರ, ನ 22 (DaijiworldNews/MS): ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಚಿತ್ರಗಳನ್ನು ಹೋರ್ಡಿಂಗ್ಗಳಲ್ಲಿ( ಜಾಹೀರಾತು ಫಲಕ) ಬಳಸಿದ್ದಕ್ಕಾಗಿ ಜಾಹೀರಾತು ಏಜೆನ್ಸಿಯೊಂದರ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಬ್ರಿಜೆಂದರ್ ಕುಮಾರ್ ರಾವತ್ ಪ್ರಕಾರ, ಸ್ಥಳೀಯ ಏಜೆನ್ಸಿಯ ಮಾಲೀಕ ಸತಯ್ ಪ್ರಕಾಶ್ ರೇಶು ವಿರುದ್ಧ ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (1) ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಸುರೇಂದರ್ ಸಿಂಗ್ ದೂರು ನೀಡಿದ್ದು, ಏಜೆನ್ಸಿಯ ಮಾಲೀಕರು ಜಾಹೀರಾತು ಫಲಕಗಳಲ್ಲಿ ಮೋಹನ್ ಭಾಗವತ್ ಅವರ ಚಿತ್ರಗಳನ್ನು ಜಾಹೀರಾತಿಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಹೀರಾತು ಫಲಕಗಳಿಂದ ಮೋಹನ್ ಭಾಗವತ್ ಅವರ ಚಿತ್ರಗಳನ್ನು ತೆಗೆಯುವಂತೆ ಹೇಳಿದ್ದರೂ ತೆಗೆಯಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.