ಕಲಬುರಗಿ, ನ.22 (DaijiworldNews/PY): "ಯಾರಾದರೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದಲ್ಲಿ ಅವರನ್ನ ಪಕ್ಷದಿಂದ ಉಚ್ಚಾಟಿಸುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸೋಮವಾರವೇ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ನಮ್ಮ ಅಭ್ಯರ್ಥಿಗಳನ್ನು 20 ಕ್ಷೇತ್ರದಲ್ಲೂ ನಿಲ್ಲಿಸುತ್ತಾರೆ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರಿಗೆ ಗುತ್ತಿಗೆದಾರರಿಂದ ಪತ್ರ ಹೋಗಿದ್ದು, ಇದು ಗಂಭೀರವಾದ ವಿಚಾರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ರಾಜ್ಯಪಾಲರನ್ನು ನಾವೂ ಕೂಡಾ ಭೇಟಿ ಮಾಡುತ್ತೇವೆ" ಎಂದು ಹೇಳಿದ್ದಾರೆ.
"ಬಿಜೆಪಿ ನಾಯಕರಿಗೆ ಕಾಂಗ್ರೆಸ್ನ ಬಗ್ಗೆ ಮಾತನಾಡದೇ ಇದ್ದರೆ ನಿದ್ದೆ ಬರುವುದಿಲ್ಲ. ಹಾಗಾಗಿ ಅವರು ನಮ್ಮ ಬಗ್ಗೆ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ಸಿನಲ್ಲಿ ಯಾವುದೇ ಬಣ ಇಲ್ಲ" ಎಂದಿದ್ದಾರೆ.
"ಮಳೆಯ ಪರಿಣಾಮ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರಿಗೆ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕೇವಲ ಘೋಷಣೆ ಮಾಡದೇ, ಹಣ ಬಿಡುಗಡೆ ಮಾಡಬೇಕು" ಎಂದು ತಿಳಿಸಿದ್ದಾರೆ.