ಶಿವಮೊಗ್, ನ.22 (DaijiworldNews/HR): ಎಂ.ಎಲ್.ಸಿ. ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಆದರೆ ಈಗಿರುವ ಬಿಟ್ ಕಾಯಿನ್ ಸೇರಿದಂತೆ, ವಿವಿಧ ಬೆಳವಣಿಗೆಗಳು ನೋಡಿದರೆ ಬೊಮ್ಮಾಯಿ ತಲೆದಂಡ ಆಗಬಹುದು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧವೇ ಅದೆಷ್ಟೋ ಕೇಸುಗಳಿವೆ, ಈಗ ನೋಡಿದರೆ ಅವರೇ ಗೃಹ ಮಂತ್ರಿಯಾಗಿದ್ದಾರೆ! ಹೀಗಾದರೆ, ನ್ಯಾಯ ಸಿಗುತ್ತಾ!? ಎಂದು ವ್ಯಂಗ್ಯವಾಡಿದ್ದಾರೆ.
ಆರಗ ಜ್ಞಾನೇಂದ್ರ ತೀರ್ಥಹಳ್ಳಿಯ ಮರ್ಯಾದೆ ತೆಗೀತಿದ್ದಾರೆ. ಆರಗ ಜ್ಞಾನೇಂದ್ರ ತೀರ್ಥಹಳ್ಳಿಯ ಪೊಲೀಸ್ ಠಾಣೆಗಳು ಮತ್ತು ಆರ್ಎಫ್ ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಬಿಜೆಪಿಯವರೇ ಅಕ್ರಮವಾಗಿ ಮರಳು ದಂಧೆ ನಡೆಸ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಗೃಹ ಸಚಿವರು, ಪೊಲೀಸರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೇಸಿದ್ದಾರೆ.
ಇನ್ನು ಗಾಂಧಿ ಹಾಗೂ ನೆಹರೂ ವಿರದ್ಧವಾಗಿ ಕೆಲವರು ಪುಸ್ತಕ ಬರೆಯುತ್ತಾರೆ. ಹೀಗೆ ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ. ಇವರು ತಮ್ಮ ಮಕ್ಕಳಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.