ಅಮರಾವತಿ, ನ.22 (DaijiworldNews/PY): ಆಂಧ್ರಪ್ರದೇಶದ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದಿರುವ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ, ರಾಜ್ಯಕ್ಕೆ ಒಂದೇ ರಾಜಧಾನಿ ಅದು ಅಮರಾವತಿ ಎಂದು ಸೋಮವಾರ ಘೋಷಣೆ ಮಾಡಿದ್ದಾರೆ.
ವೈಎಸ್ಆರ್ಸಿಪಿ ಸರ್ಕಾರವು ಅಮರಾವತಿ ಶಾಸಕಾಂಗ, ವಿಶಾಖಪಟ್ಟಣಂ ಒಂದು ಕಾರ್ಯಕಾರಿ ಹಾಗೂ ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ರಾಜ್ಯಕ್ಕೆ ಮೂರು ವಿಭಿನ್ನ ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು. ಕೇಂದ್ರ ಗೃಹ ಸಚಿವಾಲಯವು ಕಳೆದ ವರ್ಷ, ಆಂಧ್ರಪ್ರದೇಶದ ಹೈಕೋರ್ಟ್ಗೆ ರಾಜ್ಯದ ರಾಜಧಾನಿಯನ್ನು ರಾಜ್ಯ ಸರ್ಕಾರ ನಿರ್ಧರಿಸುವ ವಿಷಯ ಎಂದು ತಿಳಿಸಿದ್ದು, ಅದರಲ್ಲಿ ಕೇಂದ್ರದ ಪಾತ್ರವಿಲ್ಲ ಎಂದಿತ್ತು.
ಕೇಂದ್ರ ಸರ್ಕಾರವು, ಎಪಿ ಮರುಸಂಘಟನೆ ಕಾಯ್ದೆ, ಸೆಕ್ಷನ್ 6ರ ಅಡಿಯಲ್ಲಿ 2014ರ, ಮಾರ್ಚ್ 28ರಂದು ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿಯಾಗಿ ಪರ್ಯಾಯಗಳನ್ನು ಅಧ್ಯಯನ ಮಾಡಲು ಕೆ ಸಿ ಶಿವರಾಮಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಪ್ರತಿ ಅಫಿಡವಿಟ್ ಉಲ್ಲೇಖಿಸಿದೆ.
2014ರ ಆಗಸ್ಟ್ 30ಎಂದು ಸಮಿತಿಯು ತನ್ನ ವರದಿಯನ್ನು ಸಲ್ಲಿಸಿತ್ತು. ನಂತರ ಅದನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಕಳುಹಿಸಲಾಯಿತು. ಅಫಡವಿಟ್ನಲ್ಲಿ ರಾಜ್ಯ ಸರ್ಕಾರವು 2015ರ ಎಪ್ರಿಲ್ 23ರಂದು ರಾಜಧಾನಿಯನ್ನು ಅಮರಾವತಿ ಎಂದು ಸೂಚಿಸಿ ಆದೇಶವನ್ನು ಹೊರಡಿಸಿದೆ ಎಂದು ಉಲ್ಲೇಖಿಸಿದೆ.
ರಾಜ್ಯದಲ್ಲಿ ಮೂರು ಆಡಳಿತ ಸ್ಥಾನಗಳನ್ನು ಹೊಂದಿರಬೇಕು. ಅವುಗಳನ್ನು ರಾಜಧಾನಿಗಳೆಂದು ಕರೆಯಬೇಕು. ಅಮರಾವತಿ ಮಹಾನಗರ ಪ್ರದೇಶ ಅಭಿವೃದ್ದಿ ಪ್ರದೇಶವನ್ನು ಶಾಸಕ ರಾಜಧಾನಿ ಎಂದು ಕರೆಯಲಾಗುವುದು, ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ದಿ ಪ್ರದೇಶವನ್ನು ಕಾರ್ಯನಿರ್ವಾಹಕ ರಾಜಧಾನಿ ಹಾಗೈ ಕರ್ನೂಲ್ ನಗರಾಭಿವೃದ್ದಿ ಪ್ರದೇಶವನ್ನು ನ್ಯಾಯಾಂಗ ರಾಜಧಾನಿ ಎಂದು ಕರೆಯಲಾಗುವುದು ಎಂದು ಅಫಿಡವಿಟ್ ಉಲ್ಲೇಖಿಸಿದೆ.
ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಿಸುವ ಬೇಡಿಕೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಆಂಧ್ರಪ್ರದೇಶದ ಬಿಜೆಪಿ ನಾಯಕ ವೈಎಸ್ ಚೌಧರಿ ಹೇಳಿದ್ದಾರೆ.