ಲಕ್ನೋ, ನ.22 (DaijiworldNews/PY): "ರೈತರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಕುರಿತು ಸಂಪೂರ್ಣವಾಗಿ ಚರ್ಚೆಯಾಗುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಉತ್ತರಪ್ರದೇಶದ ಲಕ್ನೋದಲ್ಲಿ ರೈತರ ಮಹಾಪಂಚಾಯತಿ ನಡೆಯುತ್ತಿದ್ದು,ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆಯಾಗಬೇಕು ಹಾಗೂ ಅವುಗಳಿಗೆ ಪರಿಹಾರ ಸಿಗಬೇಕು. ಇಲ್ಲವಾದಲ್ಲಿ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ" ಎಂದಿದ್ದಾರೆ.
"ವಿದ್ಯುತ್ ತಿದ್ದುಪಡಿ ಕಾಯ್ದೆ ವಿಚಾರದ ಬಗ್ಗೆ ಚರ್ಚೆಯಾಗಬೇಕಿದೆ. ಕನಿಷ್ಠ ಬೆಂಬಲ ಬೆಲೆ ವಿಚಾರ ಸಹ ಬಾಕಿ ಇದೆ. ಈ ಎಲ್ಲಾ ವಿಚಾರಗಳು ಸಂಪೂರ್ಣ ಚರ್ಚೆಯಾಗುವವರೆಗೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ" ಎಂದು ಹೇಳಿದ್ದಾರೆ.
ರೈತರ ಮಹಾಪಂಚಾಯಿತಿಯ ಅಂಗವಾಗಿ ನೂರಾರು ರೈತರು ಲಕ್ನೋದಲ್ಲಿ ಸೇರಿದ್ದು, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಂಬಂಧ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗನನ್ನು ಬಂಧಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇನ್ನು, ಪ್ರತಿಭಟನಾನಿರತ ರೈತರ, ನಮ್ಮೊಂದಿಗೆ ಮಾತುಕತೆ ಆರಂಭಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದರು.