ನವದೆಹಲಿ, ನ.22 (DaijiworldNews/PY): ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿಯನ್ನು ಹಿಂತೆಗೆದುಕೊಳ್ಳುವಂತೆ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ಬಾರಾಬುಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಮತ್ತೊಂದು ಶಾಹೀನ್ ಬಾಗ್ ಸೃಷ್ಟಿಸುತ್ತಾರೆ" ಎಂದಿದ್ದಾರೆ.
"ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ರೀತಿಯಲ್ಲಿ ಸಿಎಎ ಕಾಯ್ದೆನ್ನು ರದ್ದುಪಡೆಸಬೇಕು" ಎಂದು ಹೇಳಿದ್ದಾರೆ.
"ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ನಾಗರಿಕೆ ನೋಂದಣಿ ಮೇಲೆ ಕಾನೂನು ಮಾಡಿದರೆ ನಾವು ಮತ್ತೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರನ್ನು ಸಮಾಧಾನಪಡಿಸಲು ಪ್ರಧಾನಿ ಮೋದಿ ಅವರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ" ಎಂದು ಟೀಕಿಸಿದ್ದಾರೆ.
"ಸರಕಾರ ಕೇವಲ ನಾಟಕವಾಡುತ್ತಿದೆ. ಈ ಸಮಾಜಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ. ತನ್ನನ್ನು ತಾನು ಹೀರೋ ಆಗಿ ಪರಿವರ್ತಿಸಿಕೊಳ್ಳುವ ಯಾವುದೇ ಅವಕಾಶವನ್ನು ಪ್ರಧಾನಿ ಮೋದಿ ಬಿಡುವುದಿಲ್ಲ" ಎಂದಿದ್ದಾರೆ.
"ಉತ್ತರಪ್ರದೇಶ ಚುನಾವಣೆಗೂ ಮೊದಲು, ಎಐಎಂಐಎಂ 403 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತು. 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲು ತೀರ್ಮಾನಿಸಿದೆ. ನಾವು ಮೈತ್ರಿ ಮಾಡಿಕೊಳ್ಳುತ್ತೇವೆಯೋ ಅಥವಾ ಇಲ್ಲವೋ ಎನ್ನುವುದನ್ನು ಸಮಯ ನಿರ್ಧರಿಸುತ್ತದೆ" ಎಂದು ತಿಳಿಸಿದ್ದಾರೆ.