ತಿರುಪತಿ, ನ.21 (DaijiworldNews/HR): ಆಂಧ್ರ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಪ್ರವಾಹದಿಂದ ಸಿಲುಕಿದ್ದ ಬುಚ್ಚಿರೆಡ್ಡಿಪಾಳ್ಯಂ ಮಂಡಲದ ದಾಮರಮಡುಗು ಗ್ರಾಮದ ಜನರನ್ನು ರಕ್ಷಿಸಲು ಪ್ರಯತ್ನದಲ್ಲಿರುವಾಗ ಎಸ್ಡಿಆರ್ಎಫ್ ಪೊಲೀಸ್ ಕಾನ್ಸ್ಟೇಬಲರ್ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಆಂಧ್ರದ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರನ್ನು ಕೆಲ್ಲಾ ಶ್ರೀನಿವಾಸ್ ರಾವ್ ಎಂದು ಗುರುತಿಸಲಾಗಿದೆ.
ಕೆಲ್ಲಾ ಶ್ರೀನಿವಾಸ್ ರಾವ್ ಅವರು ವಿಜಯನಗರದ ಎಸ್ಡಿಆರ್ಎಫ್ ತಂಡದ 5ನೇ ಬೆಟಾಲಿಯನ್ ಕಾನ್ಸ್ಟೇಬಲ್ ಆಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಇನ್ನು ಮಳೆರಾಯನ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 1,316 ಹಳ್ಳಿಗಳಿಗೆ ಹಾನಿಯಾಗಿದೆ.
ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ಮಳೆ ಹಾನಿಗೊಳಗಾಗಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು, ಕಡಪ, ರೇಣಿಗುಂಟಾ, ತಿರುಪತಿ ಪಟ್ಟಣದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ವೀಕ್ಷಿಸಿದ್ದಾರೆ.