ಬೆಂಗಳೂರು, ನ.21 (DaijiworldNews/HR): "ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿಹೋಗಿದ್ದು, ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ" ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಕಾಲಿಕ ಮಳೆ-ನೆರೆಗೆ ಸಿಕ್ಕಿ 20ಕ್ಕೂ ಅಧಿಕ ಜನ ಸಾವಿಗೀಡಾಗಿದ್ದಾರೆ, ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದ್ದು, ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ" ಎಂದಿದ್ದಾರೆ.
"ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ. ಇಲ್ಲೊಂದು ಸರ್ಕಾರ ಇದೆಯೇ?" ಎಂದು ಪ್ರಶ್ನಿಸಿದ್ದಾರೆ.