ಚಿಕ್ಕೋಡಿ, ನ.21 (DaijiworldNews/PY): "ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ" ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಚಿಕ್ಕೋಡಿ ನಗರದ ವಿಧಾನ ಪರಿಷತ್ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಅವರು, "ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಜೆಡಿಎಸ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಲ್ಲ. ಅಂತಹ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗುವುದು" ಎಂದಿದ್ದಾರೆ.
"ಬಿಜೆಪಿ 20 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. 20ರಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಜೆಡಿಎಸ್ ಬೆಂಬಲ ನೀಡುವ ಭರವಸೆ ಇದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಇನ್ನೂ ಕೂಡಾ ಅಭ್ಯಾರ್ಥಿಗಳನ್ನು ಘೋಷಣೆ ಮಾಡಿಯೇ ಇಲ್ಲ. ಅವರೊಳಗೆ ಗೊಂದಲ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸುಖಾಸುಮ್ಮನೆ ಆರೋಪಗಳನ್ನು ಮಾಡದೇ ರಚನಾತ್ಮಕ ಸಲಹೆಗಳನ್ನು ನೀಡಿದರೆ ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ದ" ಎಂದು ತಿಳಿಸಿದ್ದಾರೆ.
"ನಾಲ್ಕು ತಂಡಗಳಿಂದ ಜನಸ್ವರಾಜ್ಯ ಸಮಾವೇಶ ಅದ್ದೂರಿಯಾಗಿ ನಡೆದಿದ್ದು, ಇಂದು ಕೊನೆಯ ದಿನವಾಗಿದೆ. ಎಲ್ಲಾ ಕಡೆ ಜನರು ಭಾರಿ ಉತ್ಸಾಹ ಅಭಿಮಾನ ತೋರಿದ್ದಾರೆ" ಎಂದಿದ್ದಾರೆ.