ಜೈಪುರ, ನ.21 (DaijiworldNews/HR): ರಾಜಸ್ಥಾನದಲ್ಲಿ ಸಂಪುಟ ಪುನರ್ರಚನೆಯಾಗಿದ್ದು, ಸಂಪುಟದ 15 ಮಂದಿ ಹೊಸ ಸಚಿವರುಗಳು ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
11 ಮಂದಿ ಸಂಪುಟ ಸಚಿವರು ಮತ್ತು ನಾಲ್ಕು ಮಂದಿ ರಾಜ್ಯ ಖಾತೆ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜಸ್ಥಾನದ ಹೊಸ ಸಚಿವ ಸಂಪುಟವು 11 ಮಂದಿ ಹೊಸಬರನ್ನು ಒಳಗೊಳ್ಳಲಿದೆ. ಇದರಲ್ಲಿ ಸಚಿನ್ ಪೈಲಟ್ ಬಣದ 5 ಮಂದಿ ಕೂಡ ಸೇರಿದ್ದಾರೆ.
ಇನ್ನು 2018ರ ಡಿಸೆಂಬರ್ನಲ್ಲಿ ಅಶೋಕ್ ಗೆಹಲೋತ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ಪುನರ್ರಚನೆ ಆಗುತ್ತಿದೆ.
ಸಚಿವರುಗಳಾದ ಗೋವಿಂದ್ ಸಿಂಗ್, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ರಾಜ್ಯ ಖಾತೆ ಸಚಿವರುಗಳಾಗಿದ್ದ ಮಮತಾ ಭೂಪೇಶ್, ಟಿಕಾರಾಂ ಜುಲ್ಲಿ ಮತ್ತು ಭಜನ್ ಲಾಲ್ ಜತಾವ್ ಅವರು ಸಂಪುಟ ದರ್ಜೆಯ ಸಚಿವರುಗಳಾಗಲಿದ್ದಾರೆ.
ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ರಾಜೀನಾಮೆ ನೀಡಿದ 18 ಸಚಿವರು ಸೇರಿದಂತೆ ಒಟ್ಟು 30 ಸಚಿವರುಗಳನ್ನು ಹೊಂದಿರಲಿದೆ.