ಅಹ್ಮದಾಬಾದ್, ನ.21 (DaijiworldNews/PY): ಕಳ್ಳತನಕ್ಕಾಗಿ ಕಳ್ಳನೋರ್ವ ಡಯೆಟ್ ಮಾಡಿರುವ ಆಶ್ಚರ್ಯಕರ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ.
ಮೋತಿ ಸಿಂಗ್ ಚೌಹಣ್ ಎಂಬಾತ ಅಹ್ಮದಾಬಾದ್ನ ಬೋಪಾಲ್ ಪ್ರಾಂತ್ಯದಲ್ಲಿರುವ ಬಸಂತ್ ಬಹಾರ್ ಸೊಸೈಟಿ ಎಂಬಲ್ಲಿ ವಾಸವಾಗಿದ್ದ ಮೋಹಿತ್ ಮೊರಾಡಿಯಾ ಎಂಬವರ ಮನೆಯಲ್ಲಿ ಎರಡು ವರ್ಷದ ಹಿಂದೆ ಕೆಲಸದಾಳಾಗಿದ್ದ. ಹಾಗಾಗಿ ಈತನಿಗೆ ಆ ಮನೆಯವರು ಬೆಲೆಬಾಳುವ ವಸ್ತುಗಳನ್ನು ಎಲ್ಲಿಡುತ್ತಾರೆ ಎನ್ನುವುದು ತಿಳಿದಿತ್ತು.
ಚೌಹಾಣ್ ಆ ಮನೆಗೆ ಕನ್ನ ಹಾಕಲು ತೀರ್ಮಾನಿಸಿದ್ದರೂ, ಆ ಮನೆಯ ಮುಂಬಾಗಿಲು ಹಾಗೂ ಹಿಂಬಾಗಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದ ಕಾರ ಆತನಿಗೆ ಕಳ್ಳತನ ಮಾಡಲು ಧೈರ್ಯ ಮಾಡಿರಲಿಲ್ಲ. ಆಗಲೇ ಆತನಿಗೆ ಅಡುಗೆ ಮನೆಯ ಕಿಟಿಕಿಯಿಂದ ಒಳಕ್ಕೆ ತೂರಿ ಕಳ್ಳತನ ಮಾಡಲು ತೀರ್ಮಾನಿಸಿದ್ದ.
ಆತನ ದೇಹ ಅದರಲ್ಲಿ ತೂರಲು ಆಗದು ಎಂದು ತಿಳಿದ ಚೌಹಾಣ್ ಕಳೆದ ಮೂರು ತಿಂಗಳಿನಿಂದ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಾ 75 ಕೆ.ಜಿಯಿಂದ 65 ಕೆ.ಜಿ ಗೆ ದೇಹದ ತೂಕ ಇಳಿಸಿ, ಅನಂತರ ಆ ಮನೆಯೊಳಗೆ ತೂರಿ 37 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.