ಕಲಬುರಗಿ, ನ.21 (DaijiworldNews/PY): "ಸತ್ಯದ ವಿಚಾರ ಮಾತನಾಡುವಾಗ ಅನೇಕ ಅಡೆ-ತಡೆಗಳು ಬರುತ್ತವೆ. ಆದರೆ, ಅದಕ್ಕೆಲ್ಲಾ ಎದೆಗುಂದದೆ ಮುನ್ನುಗ್ಗಲು ಕಲಿತಿದ್ದೇನೆ" ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಬಿಜೆಪಿ ಮುಖಂಡರ ಹೇಳಿಕೆ ಕುರಿತು ಫೇಸ್ ಬುಕ್ನಲ್ಲಿ ಬರೆದುಕೊಂಡಿರುವ ಅವರು, "ಸತ್ಯದ ವಿಚಾರ ಮಾತನಾಡುವಾಗ ಅನೇಕ ಅಡೆ-ತಡೆಗಳು ಬರುತ್ತವೆ. ಆದರೆ, ಅದಕ್ಕೆಲ್ಲಾ ಎದೆಗುಂದದೆ ಮುನ್ನುಗ್ಗಲು ಕಲಿತಿದ್ದು ಬುದ್ಧ-ಬಸವ-ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಗಳಿಂದ. ಅವರು ಹಾಕಿಕೊಟ್ಟ ಸತ್ಯ, ಹೋರಾಟದ ಮಾರ್ಗದಲ್ಲಿ ಸಾಗುತ್ತೇನೆ ಮತ್ತು ಇದರಲ್ಲಿ ಗೆಲುವು ಕಾಣುತ್ತೇನೆ ಎಂಬ ಭರವಸೆ ಇದೆ" ಎಂದು ತಿಳಿಸಿದ್ದಾರೆ.
"ಈ ನನ್ನ ಭರವಸೆಗೆ ಬೆಂಬಲವಾಗಿ ನಿಂತ, ಸತ್ಯದ ಪರವಾಗಿನ ನನ್ನ ಪ್ರತೀ ಹೋರಾಟದಲ್ಲೂ ಜೊತೆ ನಿಲ್ಲುವ ತಮಗೆಲ್ಲಾ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವ ಎಷ್ಟೇ ಜನರು ನನ್ನ ವಿರುದ್ಧ ಏನೇ ನಾಲಿಗೆ ಹರಿಬಿಟ್ಟು, ವೈಯಕ್ತಿಕ ನಿಂದನೆ ಮಾಡಿದರೂ ಸತ್ಯ ಹೇಳುವುದನ್ನು ನಾನು ಮುಂದುವರೆಸುತ್ತೇನೆ" ಎಂದಿದ್ದಾರೆ.
"ಬಿಜೆಪಿಯ ನಾಯಕರ ಹೇಳಿಕೆಗಳ ವಿರುದ್ಧವಾಗಿ ಹಾಗೂ ನನಗೆ ಬೆಂಬಲವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದೀರಿ. ನನಗೆ ಬೆಂಬಲವಾಗಿ, ನನ್ನ ಹೋರಾಟಕ್ಕೆ ಬಲ ತುಂಬಿದ ಪ್ರತಿಯೊಬ್ಬರ ಅಭಿಮಾನಕ್ಕೆ ನಾನು ಸದಾ ಚಿರಋುಣಿ. ನನ್ನ ಹೋರಾಟ ಮುಂದುವರೆಯಲಿದೆ. ಸತ್ಯ ಮೇವ ಜಯತೆ" ಎಂದು ತಿಳಿಸಿದ್ದಾರೆ.