ನವದೆಹಲಿ, ನ.21 (DaijiworldNews/PY): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನನ್ನ ಸಹೋದರ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ವಿರುದ್ದ ಕಿಡಿಕಾರಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, "ನಿಮ್ಮ ಮಗ ಅಥವಾ ಮಗಳನ್ನು ಗಡಿಗೆ ಕಳುಹಿಸಿ, ಬಳಿಕ ಭಯೋತ್ಪಾದಕ ರಾಷ್ಟ್ರದ ಮುಖ್ಯಸ್ಥರನ್ನು ಅಣ್ಣ ಎಂದು ಕರೆಯಿರಿ" ಎಂದಿದ್ದಾರೆ.
"ಕಳೆದ 70 ವರ್ಷಗಳಿಂದ ಭಾರತವು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ದ ಹೋರಾಡುತ್ತಿದೆ. ನವಜೋತ್ ಸಿಂಗ್ ಸಿಧು ಅವರು ಭಯೋತ್ಪಾದಕ ರಾಷ್ಟ್ರದ ಪ್ರಧಾನಿಯನ್ನು ಅಣ್ಣ ಎಂದು ಕರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ.
"ಪಾಕಿಸ್ತಾನಿ ಭಯೋತ್ಪಾದಕರು ಕಳೆದ ಒಂದು ತಿಂಗಳಿನಲ್ಲಿ ಕಾಶ್ಮೀರದಲ್ಲಿ ನಮ್ಮ 40ಕ್ಕೂ ಅಧಿಕ ನಾಗರಿಕರು ಹಾಗೂ ಯೋಧರನ್ನು ಹತ್ಯೆಗೈದಿದ್ದಾರೆ. ಇದು ಸಿಧು ಅವರಿಗೆ ನೆನಪಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಣ್ಣ ಎಂದು ಕರೆದಿದ್ದರು.
ನವಜೋತ್ ಸಿಂಗ್ ಸಿಧು ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಮ್ರಾನ್ ಖಾನ್ ಪರವಾಗಿ ಪಾಕಿಸ್ತಾನಿ ಅಧಿಕಾರಿಯೋರ್ವರು ಅವರನ್ನು ಸ್ವಾಗತಿಸಿದ್ದಾರೆ. ವಿಡಿಯೋದಲ್ಲಿ ಸಿಧು, ಇಮ್ರಾನ್ ಖಾನ್ ತನ್ನ ಹಿರಿಯ ಸಹೋದರನಿದ್ದಂತೆ ಹಾಗೂ ಅವರು ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.