ಬಾಗಲಕೋಟೆ, ನ.21 (DaijiworldNews/PY): "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140 ಶಾಸಕರೊಂದಿಗೆ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ"ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಮತ್ತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪ್ರತಿಯೊಂದು ಜಿಲ್ಲೆಯ ಹಿರಿಯ-ಕಿರಿಯ ಮುಖಂಡರೊಂದಿಗೆ ಚರ್ಚಿಸಿ ಪಕ್ಷವನ್ನು ಬಲಪಡಿಸುತ್ತೇವೆ" ಎಂದು ಹೇಳಿದ್ದಾರೆ.
"ನಾನು ಸಿಎಂ ಆಗಿದ್ದಾಗಲೇ ರಾಜೀನಾಮೆ ನೀಡಿದ್ದೇನೆ. ಪುನಃ ಚುನಾವಣೆ ಸ್ಪರ್ಧಿಸುವುದು ನನ್ನ ಆದ್ಯತೆ ವಿಷಯವಲ್ಲ. 2023ರ ಚುನಾವಣೆಯಲ್ಲಿ ನಾನು ಚುನಾವಣೆ ರಾಜಕೀಯದಲ್ಲಿ ಇರಬೇಕೋ ಅಥವಾ ಬೇಡವೋ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ" ಎಂದಿದ್ದಾರೆ.