ಕಲಬುರ್ಗಿ, ನ.21 (DaijiworldNews/PY): "ಸೂಕ್ತ ರೀತಿಯಲ್ಲಿ ತನಿಖೆ ನಡೆದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿನ ಹ್ಯಾಕಿಂಗ್ ಮಾಹಿತಿ ಹೊರಬರಲಿದೆ" ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, "ತನಿಖೆ ಸೂಕ್ತವಾದ ರೀತಿಯಲ್ಲಿ ನಡೆದಲ್ಲಿ ಮಾತ್ರವೇ ಯುವ ಕಾಂಗ್ರೆಸ್ ಚುನಾವಣೆಯಲ್ಲಿನ ಹ್ಯಾಕಿಂಗ್ ಮಾಹಿತಿ ತಿಳಿಯಲಿದೆ. ಈ ಕುರಿತು ತನಿಖೆ ನಡೆದರೆ ಆನ್ಲೈನ್ ಚುನಾವಣೆಯ ಹ್ಯಾಕಿಂಗ್ ಮಾಹಿತಿ ಬಹಿರಂಗವಾಗಲಿದೆ" ಎಂದು ಹೇಳಿದ್ದಾರೆ.
"ಕಲಬುರ್ಗಿಯಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಕಿಂಗ್ ನಡೆದ ಕುರಿತು ತನಿಖೆ ನಡೆಸಲು ಬರುತ್ತದೆಯೇ ಎಂದು ಕಾಂಗ್ರೆಸ್ಸಿಗರು ಕೇಳಿದ್ದರು. ಆದರೆ, ಈ ವಿಷಯ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಕಾರಣ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಪಕ್ಷದ ಅಧ್ಯಕ್ಷರು ತನಿಖೆಗೆ ಪತ್ರ ಬರೆದಲ್ಲಿ ಪೊಲೀಸರು ತನಿಖೆ ನಡೆಸಬಹುದು ಎಂದು ಹೇಳಿ ಕಳುಹಿದ್ದಾರೆ" ಎಂದಿದ್ದಾರೆ.
"ಯುವ ಕಾಂಗ್ರೆಸ್ ಚುನಾವಣೆ ಆನ್ಲೈನ್ನಲ್ಲಿ ನಡೆದಿದ್ದು, ಇದರಲ್ಲಿ ಹ್ಯಾಕಿಂಗ್ ಆಗಿದೆ. ಆನ್ಲೈನ್ ಮತಗಳು ಒಬ್ಬರಿಗೆ ಮಾತ್ರವೇ ಹೋಗಿವೆ. ಈ ಬಗ್ಗೆ ಪ್ರತಿಸ್ಪರ್ಧಿ ಪ್ರಶ್ನಿಸಿದ ವೇಳೆ ಕೆಪಿಸಿಸಿ ಅಧ್ಯಕ್ಷರು ಕಡಿಮೆ ಮತ ಪಡೆದವರಿಗೆ ಅಧ್ಯಕ್ಷ ಸ್ಥಾನ ನೀಡಿ, ಹೆಚ್ಚು ಮತ ಪಡೆದವರನ್ನು ಮುಂದಿನ ಅಧ್ಯಕ್ಷರನ್ನಾಗಿ ಮಾಡುವುದಾಗಿ ತಿಳಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ" ಎಂದು ಲೇವಡಿ ಮಾಡಿದ್ದಾರೆ.