ಬೆಂಗಳೂರು, ನ.20 (DaijiworldNews/PY): "ಸಿದ್ದರಾಮಯ್ಯ ಅವರಿಗೆ ಮುಂದಿನ ಸೋಲಿನ ಭೀತಿಗಿಂತಲೂ, ಚಾಮುಂಡೇಶ್ವರಿಯಲ್ಲಿ ಅನುಭವಿಸಿದ ಹಿಂದಿನ ಸೋಲು ದುಸ್ವಪ್ನದಂತೆ ಕಾಡುತ್ತಿದೆ" ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಿದ್ದರಾಮಯ್ಯ ಅವರಿಗೆ ಮುಂದಿನ ಸೋಲಿನ ಭೀತಿಗಿಂತಲೂ, ಚಾಮುಂಡೇಶ್ವರಿಯಲ್ಲಿ ಅನುಭವಿಸಿದ ಹಿಂದಿನ ಸೋಲು ದುಸ್ವಪ್ನದಂತೆ ಕಾಡುತ್ತಿದೆ. ಸಿದ್ದರಾಮಯ್ಯನವರೇ, ಚಾಮುಂಡೇಶ್ವರಿ ಕ್ಷೇತ್ರದ ಮತದಾರರೆಲ್ಲರೂ ನಿಮ್ಮ ಸೋಲಿಗೆ ಕಾರಣ ಎಂದು ಏಕೆ ಭಾವಿಸುತ್ತೀರಿ? ಮತದಾರರನ್ನು ಏಕೆ ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದೀರಿ? ಎಂದು ಪ್ರಶ್ನಿಸಿದೆ.
ಚಾಮುಂಡೇಶ್ವರಿ ಕ್ಷೇತ್ರದ ಜನತೆ ಬುರುಡೆರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ಸ್ಥಿತಿ ಭವಿಷ್ಯದಲ್ಲಿ ಬಾದಾಮಿ ಕ್ಷೇತ್ರದ ಜನರಿಗೆ ಬಂದರೂ ಆಶ್ಚರ್ಯವಿಲ್ಲ. ಸಿದ್ದರಾಮಯ್ಯ ಒಬ್ಬ"ಹವಾಮಾನ ತಜ್ಞ". ಹೀಗಾಗಿ 2018 ರಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಈ ಬಾರಿಯೂ ಸೋಲಿನ ವಾಸನೆ ಗ್ರಹಿಸಿ ಚಾಮರಾಜಪೇಟೆಯತ್ತ ಕಣ್ಣಿಟ್ಟಿದ್ದಾರೆ ಎಂದು ಟೀಕಿಸಿದೆ.
"ಎಲ್ಲರನ್ನೂ ಖರೀದಿ ಮಾಡಿರುವಂತೆ ವರ್ತಿಸುವುದು ಸಿದ್ದರಾಮಯ್ಯ ಅವರ ಮೂಲಗುಣ. ಗೆದ್ದ ಮೇಲೆ ಕ್ಷೇತ್ರವನ್ನೇ ಮರೆತಿರುವ ಸಿದ್ದರಾಮಯ್ಯ ಅವರಿಗೆ ಬಾದಾಮಿ ಜನತೆಯೂ ಮುಂದೆ ನೆನಪಿರುವಂಥ ಪಾಠ ಕಲಿಸಲಿದ್ದಾರೆ" ಎಂದಿದೆ.