ನವದೆಹಲಿ, ನ.20 (DaijiworldNews/PY): "ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೇ ಕಾನೂನುಗಳನ್ನು ರಚಿಸುವುದು ಹಾಗೂ ರದ್ದು ಮಾಡುವುದು ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ" ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪ್ರಧಾನಮಂತ್ರಿ ಅವರ ಈ ಘೋಷಣೆ ಮುತ್ಸದ್ದೀತನದ ನಡೆ ಎಂದು ಗೃಹ ಸಚಿವರು ಶ್ಲಾಘಿಸಿದ್ದಾರೆ. ಪ್ರಧಾನಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ರೈತರ ಕಲ್ಯಾಣವನ್ನು ಪರಿಗಣಿಸಿ ಪ್ರಧಾನಿ ಅವರು ನಿರ್ಧಾರ ಕೈಗೊಂಡಿದ್ದಾರೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ಆದರೆ, ಕಳೆದ 15 ತಿಂಗಳಲ್ಲಿ ಈ ಮಹಾನ್ ನಾಯಕರು ಎಲ್ಲಿದ್ದರು ಹಾಗೂ ಅವರ ಬುದ್ದಿವಂತ ಸಲಹೆಗಳು ಎಲ್ಲಿದ್ದವು?" ಎಂದು ಕೇಳಿದ್ದಾರೆ.
"ಸಚಿವ ಸಂಪುಟ ಸಭೆ ನಡೆಸದೇ ಪ್ರಧಾನಿ ಮೋದಿ ಅವರು ಈ ಘೋಷಣೆ ಮಾಡಿರುವುದು ನೀವು ಗಮನಿಸಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.