ನವದೆಹಲಿ, ನ.20 (DaijiworldNews/HR): ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರ ಮೊದಲೇ ತೆಗೆದುಕೊಂಡಿದ್ದರೆ ರೈತರ ಅನೇಕ 'ಮುಗ್ಧ ಜೀವಗಳನ್ನು' ಉಳಿಸಬಹುದಿತ್ತು ಎಂದು ಉತ್ತರ ಪ್ರದೇಶದ ಪಿಲಿಭಿತ್ನ ಬಿಜೆಪಿ ಸಂಸದ ವರುಣ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ವರುಣ್ ಗಾಂಧಿ ಸಾವನ್ನಪ್ಪಿರುವ ರೈತರ ಕುಟುಂಬಗಳಿಗೆ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದು, ಪ್ರತಿಭಟನಾಕಾರರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ಎಫ್ಐಆರ್ಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ಧ 'ಕಟ್ಟುನಿಟ್ಟಿನ ಕ್ರಮ' ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ನಮ್ಮ ಪ್ರಜಾಪ್ರಭುತ್ವಕ್ಕೆ ಲಖಿಂಪುರ ಖೇರಿಯಲ್ಲಿ ನಡೆದಂತಹ ಘಟನೆ ಕಳಂಕವಾಗಿದ್ದು, ಈ ಘಟನೆ ಸಂಬಂಧ ಕೇಂದ್ರ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ನ್ಯಾಯಯುತ ವಿಚಾರಣೆ ನಡೆಯಬೇಕು ಎಂಬುದು ನನ್ನ ಮನವಿ' ಎಂದು ಪತ್ರದಲ್ಲಿ ಬರೆದಿದ್ದಾರೆ.