ಪತ್ತನಂತಿಟ್ಟ, ನ 20 (DaijiworldNews/MS): ಭಾರೀ ಮಳೆ ಮತ್ತು ಪಂಬಾ ಸೇರಿದಂತೆ ಪ್ರಮುಖ ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಕೇರಳದ ಪತ್ತನಂತಿಟ್ಟದಲ್ಲಿರುವ ಶಬರಿಮಲೆಯ ಅಯ್ಯಪ್ಪ ದೇಗುಲದ ಯಾತ್ರೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಪಂಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಕ್ಕಿ-ಆನಾತೋಡ್ ಜಲಾಶಯ (ಗೇಟ್ಗಳು ತೆರೆದು) ಮತ್ತು ಪಂಬಾ ಅಣೆಕಟ್ಟುಗಳ ತೀರಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಪಂಬಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಶುಕ್ರವಾರ ಆದೇಶದಲ್ಲಿ ತಿಳಿಸಿದ್ದಾರೆ.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಅಯ್ಯಪ್ಪನ ದರ್ಶನಕ್ಕೆ ಮುಂಚಿತವಾಗಿ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಅನುಕೂಲಕರವಾದ ಬಳಿಕ "ದರ್ಶನ" (ವೀಕ್ಷಣೆ) ಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ತಿಳಿಸಿದ್ದಾರೆ.
ಕೇರಳದಲ್ಲಿ ವಿಪರೀತ ಮಳೆಯಿದ್ದರೂ ನೂರಾರು ಭಕ್ತರು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಶಬರಿಮಲೆ ಬೆಟ್ಟವನ್ನು ಹತ್ತಿ ಚಾರಣ ಮಾಡುತ್ತಿದ್ದಾರೆ. ಎರಡು ತಿಂಗಳ ಕಾಲ ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ನವೆಂಬರ್ 16ರಂದು ಶಬರಿಮಲೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.