ಹೈದರಬಾದ್, ನ 20 (DaijiworldNews/MS): ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಶುಕ್ರವಾರದಂದು ಮಾಧ್ಯಮಗಳೆದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಪತ್ನಿ ಭುವನೇಶ್ವರಿ ಅವರ ಮೇಲೆ ಕಠೋರ ಮತ್ತು ಅವಹೇಳನಕಾರಿ ಮಾತಿನ ದಾಳಿ ನಡೆಸಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ವಿಧಾನಸಭೆಯಲ್ಲಿ ಇಷ್ಟೊಂದು ಅವಮಾನವನ್ನು ಹಿಂದೆಂದೂ ಅನುಭವಿಸಿರಲಿಲ್ಲ ಎಂದು ಗದ್ಗದಿತರಾಗಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ ಪಕ್ಷವಾಗಿರುವ ವೈಎಸ್ಆರ್ಸಿಪಿಯ ನಾಯಕ ರೊಂದಿಗೆ ಮನಸ್ತಾಪ ಮಾಡಿಕೊಂಡು, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಆಂಧ್ರಪ್ರದೇಶ ವಿಧಾನಸಭೆಯಿಂದ ಹೊರನಡೆದ ಸ್ವಲ್ಪ ಸಮಯದ ಪತ್ರಿಕಾಗೋಷ್ಟಿ ನಡೆಸಿ ಮಾಧ್ಯಮದವರೆದುರು ಅಳುತ್ತಾ ಹೇಳಿಕೊಂಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ನಾನು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ ಆದರೂ ಎಂದಿಗೂ ಶಾಂತವಾಗಿದ್ದೆ, ಆದರೆ ಇಂದು ಅವರು ನನ್ನ ಹೆಂಡತಿಯನ್ನೂ ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ , ನನ್ನಪತ್ನಿ ಭುವನೇಶ್ವರಿ ಎಂದಿಗೂ ರಾಜಕೀಯಕ್ಕೆ ಬಂದಿಲ್ಲ, ನಾನು ಯಾವಾಗಲೂ ಗೌರವ ಮತ್ತು ಗೌರವಕ್ಕಾಗಿ ಬದುಕಿದ್ದೇನೆ. ಆದರೆ ಇಂದು ನನ್ನ ಪತ್ನಿಯ ಹೆಸರನ್ನೂ ಎಳೆತಂದು ಅವಮಾನ ಮಾಡಲಾಗಿದೆ. ಅದನ್ನು ಪ್ರಶ್ನಿಸಲು ಹೋದರೆ, ಸ್ಪೀಕರ್ ನನ್ನ ಮೈಕ್ ಅನ್ನೇ ಆಫ್ ಮಾಡಿದ್ದಾರೆ. ಈ ರೀತಿಯ ಅವಮಾನವನ್ನು ನನ್ನಿಂದ ಸಹಿಸಲಾಗುವುದಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.
ಇನ್ನು ನಾಯ್ಡು ವಿಧಾನಸಭೆಯಿಂದ ಹೊರನಡೆದಿದ್ದು, ಮತ್ತೆ ವಿಧಾನ ಸಭೆಯ ಮೆಟ್ಟಿಲೇರಿದರೆ ಅದು ಮುಖ್ಯಮಂತ್ರಿಯಾಗಿಯೇ ಎಂದು ಶಪಥವನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ.