ಛತ್ತೀಸ್ಗಡ, ನ.20 (DaijiworldNews/PY): "ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ, ಹೇಗೆ ಬದುಕಬೇಕು ಎನ್ನುವುದನ್ನು ಕಲಿಸುತ್ತೇವೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಛತ್ತೀಸ್ಗಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ನಾವು ಯಾರನ್ನೂ ಮತಾಂತರಗೊಳಿಸುವ ಅಗತ್ಯವಿಲ್ಲ. ಇಡೀ ಜಗತ್ತಿಗೆ ಈ ಪಾಠವನ್ನು ಭಾರತ ಕಲಿಸಿದೆ. ಎಲ್ಲರಿಗೂ ಸಹ ನಮ್ಮ ಪಂಥ ಒಳ್ಳೆಯದನ್ನೇ ಮಾಡುತ್ತದೆ. ಯಾರ ಧರ್ಮವನ್ನೂ ನಾವು ಬದಲಾಯಿಸಲು ಒತ್ತಾಯಿಸುವುದಿಲ್ಲ" ಎಂದಿದ್ದಾರೆ.
"1930ರಿಂದ ದೇಶದಲ್ಲಿ ಮುಸ್ಲಿಂ ಜನಶಕ್ತಿಯನ್ನು ಹೆಚ್ಚಿಸು ಯತ್ನ ನಡೆಯುತ್ತಿದೆ. ಭಾರತವನ್ನು ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡುವ ಉದ್ದೇಶದಿಂದ ಮುಸ್ಲಿಮರ ಪ್ರಾಬಲ್ಯವನ್ನು ಹೆಚ್ಚಿಸಲು ಸಾಕಷ್ಟು ಯತ್ನಗಳು ನಡೆಯುತ್ತಿದೆ. 1930ರಿಂದಲೇ ಅಸ್ಸಾಂ ಸೇರಿದಂತೆ ಪಂಜಾಬ್, ಸಿಂಧ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ರೀತಿಯಾದ ಯತ್ನಗಳು ನಡೆಯುತ್ತಿದೆ. ಅಲ್ಲದೇ, ಇದು ನಿರ್ದಿಷ್ಟ ಮಟ್ಟದಲ್ಲಿ ಯಶಸ್ವಿ ಆಗಿದೆ" ಎಂದು ಆರೋಪಿಸಿದ್ದರು.
"ಎಲ್ಲಾ ಭಾರತ ವಾಸಿಗಳ ಡಿಎನ್ಎ ಒಂದೇ ಆಗಿದೆ. ಹಾಗಾಗಿ ಅವರು ಯಾವ ಧರ್ಮವನ್ನು ಆರಾಧಿಸುತ್ತಾರೆ ಎನ್ನುವುದರ ಮೇಲೆ ಅವರನ್ನು ಬೇರೆ ಮಾಡಲು ಆಗುವುದಿಲ್ಲ. ಹಾಗಾಗಿ ಮುಸ್ಲಿಮರು ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎನ್ನುವ ತಪ್ಪು ತಿಳುವಳಿಕೆಯನ್ನು ಬಿಡಿ" ಎಂದಿದ್ದರು.