National
ನವದೆಹಲಿ: ಪ್ರತಿರೋಧವಿದ್ದಾಗ ನಿಲುವು ಬದಲಾಯಿಸದಿದ್ದಲ್ಲಿ ಭವಿಷ್ಯ ಹೇಳೋದು ಕಷ್ಟ!
- Sat, Nov 20 2021 12:54:06 AM
-
ಸಂತೋಷ್ ಎಂ
ನವದೆಹಲಿ, ನ. 20 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಎಂದಾಕ್ಷಣ ನೆನಪಾಗೋದು, ಎದೆಗಾರಿಕೆ, ಮಾತುಗಾರಿಕೆ, ದಿಟ್ಟತನ, ತಲೆ ಎತ್ತಿ ನಡೆಯೋದು. ಆದರೆ, ರೈತರ ಮುಂದೆ ಇದೆಲ್ಲವೂ ಕರಗಿ ಹೋಗಿದೆ. ದಿಟ್ಟ ನಿರ್ಧಾರ ಕೈಗೊಂಡು ತಲೆ ತಗ್ಗಿಸದೇ ನಡೆಯುವ ಮೋದಿ ಅನ್ನದಾತನ ಮುಂದೆ ಶಿರಬಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2021ರ ನವೆಂಬರ್ 19ರಂದು ದೇಶದಲ್ಲೇ ಮಹತ್ವದ ಘೋಷಣೆ ಮಾಡುವ ಮೂಲಕ ರೈತರ ವಿರೋಧದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ಈ ಘೋಷಣೆ ವಿವಿಧ ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರ ಸದ್ಯ ಪ್ರಶ್ನಾರ್ಥಕವಾಗಿದೆ.ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಜನ ಬೆಂಬಲ, ತಮ್ಮ ಪಕ್ಷದ ಬೆಂಬಲ, ಕಾರ್ಯಕರ್ತರ ಬೆಂಬಲ ಪ್ರಧಾನಿಗೆ ಸಿಗುತ್ತಿತ್ತು. ತಮ್ಮ ಒಂದೊಂದೂ ನೀತಿಯನ್ನು ಜನರ ಮನ ಮುಟ್ಟುವ ರೀತಿಯಲ್ಲೂ ಈ ಹಿಂದೆ ವಿವರಿಸಿ ಸೈ ಎಣಿಸಿಕೊಂಡಿದ್ದರು. ಸಾಲದ್ದಕ್ಕೆ, ತಮ್ಮವರ, ಪಕ್ಷದ ಕಾರ್ಯಕರ್ತರ ಮೂಲಕ, ಸಾಮಾಜಿಕ ಜಾಲ ತಾಣಗಳ ಸಮರ್ಪಕ ಬಳಕೆಯಿಂದಾಗಿ ಕ್ಷಣಾರ್ಧದಲ್ಲೇ ಪ್ರಜೆಗಳಿಗೆ ಮುಟ್ಟುವ ಕಾರ್ಯ ನಡೆಯುತ್ತಿತ್ತು. ದೇಶಕ್ಕೆ ಒಲಿತಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನಿರ್ಧಾರ ಕೈಗೊಳ್ಳುತ್ತಾರೆ, ಬಡವರ್ಗದ ಏಳಿಗೆಗಾಗಿ ಯೋಜನೆ ಜಾರಿಗೊಳ್ಳುತ್ತವೆ ಎಂದು ಜನರೂ ಕೂಡ ಪಿಎಂ ಅವರ ಹಲವು ಘೋಷಣೆಗಳಿಗೆ ಶಿರ ಭಾಗಿದ್ದರು.
ಆದರೆ, ಕೃಷಿ ತಿದ್ದುಪಡಿ ಕಾಯ್ದೆಯ ಬಗ್ಗೆ ಅದೆಷ್ಟೇ ವಿವರಣೆ ನೀಡಿದರೂ, ಎಷ್ಟೇ ಮಾತುಕತೆಗಳನ್ನು ನಡೆಸಿದರೂ ರೈತರು ಮಾತ್ರ ಅದನ್ನು ಸ್ವೀಕರಿಸಲೇ ಇಲ್ಲ. ಜಾರಿಗೆ ತಂದ ಕಾಯ್ದೆಯನ್ನು ರದ್ದುಗೊಳಿಸುವ ತನಕ ಎಳ್ಳಷ್ಟು ತಮ್ಮ ಹೋರಾಟದಿಂದ ಹಿಂದಡಿ ಇಡೆವು ಎಂಬ ಛಲ ನಿರ್ಧಾರ ಅನ್ನದಾತರದ್ದಾಗಿತ್ತು. ಇದೇ ಉದ್ದೇಶದಿಂದ ಸರಿಸುಮಾರು 13 ತಿಂಗಳು ಅಂದರೆ, ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ದೆಹಲಿಯ ಹಲವು ಗಡಿ ಭಾಗಗಳಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ನಡೆಸುತ್ತಿದ್ದರು. ತಿದ್ದುಪಡಿ ಕಾಯ್ದೆ ಜಾರಿಗೊಳಿಸಿಯೇ ಸಿದ್ದ ಎಂದು ಸರಕಾರ ಹಟ ಹಿಡಿದರೆ, ಜಾರಿಗೊಳಿಸಿದ ಕಾಯ್ದೆ ರದ್ದುಗೊಳಿಸದೆ ಬಿಡೋದಿಲ್ಲ ಎನ್ನುವ ಪಣ ರೈತರಲ್ಲಿತು. ರೈತ ಮುಖಂಡರೊಂದಿಗೆ ಸರಕಾರ ಮಾತುಕತೆ ನಡೆಸಿದ್ದಕ್ಕೆ ಲೆಕ್ಕವಿಲ್ಲ. ಎಷ್ಟೇ ವಿವರವಾದ ಮಾಹಿತಿ ಸರಕಾರ ನೀಡಿದರೂ ಕೇಳುವ ತಾಳ್ಮೆ ಅನ್ನದಾತನಲ್ಲಿರಲಿಲ್ಲ. ಪಟ್ಟು ಬಿಡದೆ ಹೋರಾಡುತ್ತಿದ್ದ ಕೃಷಿಕನ ಮುಂದೆ ಮೋದಿ ಸರಕಾರ ಶಿರಭಾಗಿದೆ.
ದಿಟ್ಟ ನಿರ್ಧಾರದೊಂದಿಗೆ ಮುನ್ನುಗ್ಗುತ್ತಿದ್ದ ಮೋದಿಗೆ ಹಿನ್ನಡೆ!
ಇನ್ನು ಐದು ವರ್ಷಗಳ ಹಿಂದೆ ಅಂದರೆ, 2016ರ ನವಂಬರ್ ತಿಂಗಳ 8ನೇ ತಾರೀಕಿನಂದು ದೇಶದಲ್ಲೇ ಪ್ರಧಾನಿ ಮೋದಿ ನೋಟ್ ಬ್ಯಾನ್ ನಂತಹ ಮಹತ್ವದ ಘೋಷಣೆ ಮಾಡಿದ್ದರು. ಇದರಿಂದ ಜನರಿಗೆ ಅಲ್ಪ ಸಮಸ್ಯೆಯಾಗಿತ್ತಾದರೂ, ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ, ಸಂಪತ್ತಿನ ಏಕಮುಖ ಹಂಚಿಕೆ ಇಂತಹ ಸಮಸ್ಯೆ ಪರಿಹಾರವಾಗುತ್ತೆ ಎಂದು ಜನರು ಮೋದಿಜೀ ನಿರ್ಧಾರವನ್ನು ಸ್ವಾಗತಿಸಿದ್ದರು.2017ರ ಜುಲೈ 1ರಂದು ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ತಂದರು. ಇದಕ್ಕೆ ಅಲ್ಪ ಪ್ರಮಾಣದ ಪ್ರತಿರೋಧ ಎದುರಾದರೂ, ಬಳಿಕ ಜನರಿಗೆ ಮನದಟ್ಟು ಮಾಡುವಲ್ಲಿ ಸರಕಾರ ಯಶಸ್ವಿಯಾಗಿತ್ತು.
2019ರ ಆ.01ರಂದು ಜಾರಿಗೆ ಬಂದ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ಸಂರಕ್ಷಣೆ) ಕಾಯಿದೆ (ತ್ರಿವಳಿ ತಲಾಕ್ ನಿಷೇಧ) ಕಾನೂನು ಪ್ರಧಾನಿ ಮೋದಿಯವರ ದಿಟ್ಟ ಹೆಜ್ಜೆ. ಬಳಿನ ನಡೆದ ಚುನಾವಣೆಯಲ್ಲೂ ಇದು ವರ್ಕೌಟ್ ಆಗಿತ್ತು. ಅನೇಕ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದರು.
ಮೋದಿ ಪ್ರಧಾನಿಯಾದಾಕ್ಷಣ ಮೇಕ್ ಇನ್ ಇಂಡಿಯಾ ಘೋಷಣೆ ಮಾಡಿದರು. ವಿದೇಶಿ ಕಂಪೆನಿಗಳಿಗೆ, "ಭಾರತಕ್ಕೆ ಬನ್ನಿ" ಮತ್ತು ದೇಶವನ್ನು ಉತ್ಪಾದನಾ ಹಬ್ ಆಗಿ ಮಾಡಿ ಎಂದು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು. ದೇಶದಲ್ಲಿ ಒಂದಿಷ್ಟು ಉದ್ಯೋಗದ ಬಾಗಿಲು ತೆರೆದುಕೊಂಡಿತು.
ಇನ್ನುಳಿದಂತೆ ಸ್ವಚ್ಛ ಭಾರತ್ ಯೋಜನೆ, ಜನ್ ಧನ್ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಡಿಜಿಟಲ್ ಇಂಡಿಯಾ, ಮನ್ ಕೀ ಬಾತ್ ಹೀಗೆ ಪ್ರಧಾನಿ ಜನರ ಮನೆ ಮಾತಾಗಿದ್ದರು. ಸಿಎಎ ಎನ್ ಆರ್ ಸಿ ವಿಚಾರವನ್ನು ಬಲು ಚಾಲಾಕಿತನದಿಂದ ನಿಭಾಯಿಸಿದ್ದರು. ಕೊರೋನಾ ಸಂದರ್ಭದಲ್ಲಿ, ಲಾಕ್ ಡೌನ್, ಜನತಾ ಕರ್ಫ್ಯೂ, ವ್ಯಾಕ್ಸಿನೇಷನ್ ಡ್ರೈವ್ ಇತ್ಯಾದಿಗಳಿಂದಲೂ ಪ್ರಧಾನಿ ಮೇಲುಗೈ ಸಾಧಿಸಿದ್ದರು. ಪ್ರತಿ ನಿರ್ಧಾರಗಳ ಸಂದರ್ಭದಲ್ಲೂ ಪ್ರತಿ ಪಕ್ಷಗಳು ಟೀಕಿಸುತ್ತಿದ್ದವು. ಪ್ರಧಾನಿ ಮೋದಿ ಅವರಿಗೆ ಸೂಕ್ತ ಉತ್ತರವನ್ನೇ ನೀಡುತ್ತಿದ್ದರು.ಇನ್ನು ವಿದೇಶಿ ಪ್ರವಾಸದ ಸಂದರ್ಭದಲ್ಲೂ ಪ್ರಧಾನಿ ಮೋದಿ ವಿಶೇಷ ಗೌರವಗಳಿಗೆ ಪಾತ್ರರಾಗುತ್ತಿದ್ದರು. ಅದ್ದೂರಿ ಸ್ವಾಗತವನ್ನು ಪಡೆಯುತ್ತಿದ್ದರು. ಅಷ್ಟರ ಮಟ್ಟಿಗೆ ಮೋದಿ ಹವಾ ಪಸರಿಸಿದೆ. ಆದರೆ, ಕೃಷಿ ಕಾಯ್ದೆ ವಿಚಾರವೊಂದೇ ಎರಡು ಅವಧಿಯ ಆಡಳಿತಾಧಿಕಾರಿಯಾಗಿದ್ದ ಪ್ರಧಾನಿಗೆ ಮುಳುವಾಗಿದ್ದು. ಇದೇ ವಿಚಾರ ದೇಶದ ಜನರ ಮುಂದೆ ಒಂದಿಷ್ಟು ಅಳುಕಿನೊಂದಿಗೆ ತನ್ನ ನಿರ್ಧಾರ ಹಿಂಪಡೆದಿದ್ದೇನೆ ಎಂದಿದ್ದು. ಆದರೆ, ಅಸಲಿಗೆ ಪ್ರಧಾನಿ ಈ ನಿರ್ಧಾರಕ್ಕೆ ಬರಲು ಕಾರಣವೇನು ಎನ್ನುವುದು ದೇಶದ ಕೋಟ್ಯಾಂತರ ಜನರ ಪ್ರಶ್ನೆ?
ಚುನಾವಣೆಯತ್ತ ಕಮಲ ಚಿತ್ತ !
ಸ್ವತಂತ್ರೋತ್ತರ ಭಾರತದಲ್ಲಿ ಅಪರೂಪವೆಂಬಂತೆ ಒಂದು ಸುದೀರ್ಘ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆದರೆ, ಲೆಕ್ಕಾಚಾರದ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿಗೆ ಮುಂಬರು ಏಳು ರಾಜ್ಯಗಳ ಎಲೆಕ್ಷನ್ ಟಾರ್ಗೆಟ್ ಎನ್ನುವುದು ಸದ್ಯದ ಲೆಕ್ಕಚಾರ.
ಉಳುವ ಯೋಗಿಯನ್ನು ಎದುರಾಕಿಕೊಂಡು ಉತ್ತರ ಪ್ರದೇಶದ ಯೋಗಿ ಸರಕಾರ ಉಳಿಸುವುದು, ಪಂಜಾಬ್ ಕೈ ಕೆಳಗಾಗಿಸುವುದು ಕಷ್ಟ ಎನ್ನುವ ಲೆಕ್ಕಾಚಾರಕ್ಕೆ ಕಮಲ ಹೈ ಕಮಾಂಡ್ ಬಂದಿತ್ತು. ಇದರ ಜೊತೆಗೆ 2022ರಲ್ಲಿ ನಡೆಯುವ ಮಣಿಪುರ್, ಉತ್ತರಖಂಡ್, ಹಿಮಾಚಲಪ್ರದೇಶ್, ಗುಜರಾತ್, ಗೋವಾ ವಿಧಾನಸಭಾ ಚುನಾವಣೆ ಗೆಲ್ಲುವುದು ಕಮಲ ಪಾಳಯಕ್ಕೆ ಪ್ರಮುಖವಾಗಿದೆ. ಈ ಚುನಾವಣೆಗಳಿಗೆ ಇದೇ ರೈತರ ಪ್ರತಿಭಟನೆ ವಿಚಾರವೇ ಬಿಜೆಪಿ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆ ಇದ್ದಂತಹ ಕಾರಣದಿಂದಾಗಿ ಅಳೆದು ತೂಗಿ ಮೋದಿಜೀಯವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಭುತ್ವದ ಕರಾಳ ದಿನಕ್ಕೆ ಸಾಕ್ಷಿಯಾಗಿದ್ದ ಹೋರಾಟ
2021 ಜನವರಿ 26 ದೇಶದೆಲ್ಲೆಡೆ ಗಣರಾಜ್ಯೋತ್ಯವ, ಪ್ರಜಾಪ್ರಭುತ್ವ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ದೆಹಲಿಯ ಕೆಂಪುಕೋಟೆಯಲ್ಲೂ ಅದ್ದೂರಿ ಕಾರ್ಯಕ್ರಮ. ಅದೇ ದಿನ ದೆಹಲಿ ಪ್ರವೇಶಿಸಿದ ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಯದ್ವತದ್ವ ಟ್ಯಾಕ್ಟರ್ ಚಲಾವಣೆ, ಆಯುಧಗಳೊಂದಿಗೆ ಮುನ್ನುಗ್ಗಿದ ಸಂದರ್ಭ ಮೈ ಜುಂ ಎಣಿಸುವ ಸನ್ನಿವೇಶ. ಕೆಂಪುಕೋಟೆ ಮೇಲೇರಿ ರಾಷ್ಟ್ರ ಧ್ವಜದ ಸ್ಥಳದಲ್ಲಿ ಸ್ಥಳೀಯ ಧ್ವಜವನ್ನು ಹಾರಾಟ ಮಾಡುವ ಮೂಲಕ ಕರಾಳ ದಿನಕ್ಕೆ ಸಾಕ್ಷಿಯಾಗಿತ್ತು.
ರೈತರಲ್ಲ ರಾಷ್ಟ್ರದ್ರೋಹಿಗಳು, ಉಗ್ರ ಬೆಂಬಲಿತ ಸಂಘಟನೆಯವರು...!
ಇನ್ನು ದೆಹಲಿಯ ಕೆಂಪುಕೋಟೆ ಮುತ್ತಿಗೆ ಹಾಗೂ ಉಗ್ರ ಪ್ರತಿಭಟನೆಯನ್ನು ಗಮನಿಸಿದ ಬಳಿಕ ರೈತರ ವಿರುದ್ಧ ಘೋಷಣೆಗಳು ಶುರುವಾಗಿದ್ದವು. ಇವರು ರೈತರಲ್ಲಿ ರೈತ ಸಂಘಟನೆಗಳಲ್ಲಿ ಪಕ್ಕದ ಪಾಕ್, ಅಫ್ಘಾನ್, ಕಜಕಿಸ್ತಾನ್ ಜನ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ. ಇವರು ರಾಷ್ಟ್ರ ವಿರೋಧಿಗಳು, ಉಗ್ರ ಬೆಂಬಲಿತ ಸಂಘಟನೆಯವರು ಎಂಬಿತ್ಯಾ ಹೇಳಿಕೆಗಳು ದೇಶದಲ್ಲಿ ಕೇಳಿಬಂದಿತ್ತು. ಆದರೆ, ಪ್ರಧಾನಿ ಮೋದಿಯವರ ಇಂದಿನ ನಿರ್ಧಾರ ಹಾಗೂ ಅಂದು ಕೆಲವು ನಾಯಕರು ನೀಡಿದ ಹೇಳಿಕೆ ಇದೀಗ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ರಾಷ್ಟ್ರ ವಿರೋಧಿಗಳಿಗೆ ಪ್ರಧಾನಿ ತಲೆ ಬಾಗುವ ಅಗತ್ಯವಿತ್ತೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.ಎದೆಗಾರಿಕೆ, ದಿಟ್ಟತನ, ವಾಕ್ ಚಾತುರ್ಯ, ಬುದ್ಧಿವಂತಿಕೆ ಎಲ್ಲದರ ಮೂಲಕ ದೇಶದ ಪ್ರತಿಯೊಬ್ಬರ ಮುಂದೆ ಮಾತ್ರವಲ್ಲದೆ ವಿಶ್ವದ ಮುಂದೆಯೇ ತಲೆ ಎತ್ತಿ ನಿಲ್ಲುತ್ತಿದ್ದ ಪ್ರಧಾನಿಯವರಲ್ಲಿ ರೈತ ಹೋರಾಟದ ಕಿಚ್ಚು ಎದೆಯಲ್ಲಿ ನಡುಕವನ್ನುಂಟು ಮಾಡಿ ಅನ್ನದಾತನ ಮುಂದೆ ಶಿರ ಬಾಗುವಂತೆ ಮಾಡಿದೆ.
ಮುಂದೆ ಈ ಕಾಯ್ದೆಯ ರದ್ದತಿ ಯಾವ ಸ್ವರೂಪ ಪಡೆದುಕೊಳ್ಳಲಿದೆ, ಪ್ರಧಾನಿ ಮೋದಿ ರೂಪಿಸಿಕೊಂಡಿರುವ ಹೊಸ ಕಾರ್ಯ ಯೋಜನೆ ಯಾವುದು? ಚುನಾವಣೆಗೆ ಸೀಮಿತವಾಗಿಯೇ ತಮ್ಮ ನಿರ್ಧಾರ ಕೈ ಬಿಟ್ಟಿದ್ದಾರೆಯೇ ಎನ್ನುವುದು ಸದ್ಯ ಉತ್ತರ ಸಿಗದ ಪ್ರಶ್ನೆಗಳಾಗಿವೆ.