ಕೇರಳ, ನ.19 (DaijiworldNews/HR): ಪೊಲೀಸರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಕಾರಣಕ್ಕೆ ಎಂಟು ವರ್ಷದ ಬಾಲಕಿಯೊಬ್ಬಳು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.
ರೆಜಿತಾ ಎಂಬ ಸಿವಿಲ್ ಪೊಲೀಸ್ ಅಧಿಕಾರಿ ತನ್ನ ಮೇಲೆ ಮೊಬೈಲ್ ಫೋನ್ ಕದ್ದಿರುವ ಸುಳ್ಳು ಆರೋಪ ಹೊರಿಸಿದ್ದು, ಈ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಬಾಲಕಿ ಮತ್ತು ಆಕೆಯ ತಂದೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಸುರಂಗ ನಿರ್ಮಾಣಕ್ಕೆ ಬಳಸಲಾದ ಯಂತ್ರೋಪಕರಣಗಳನ್ನು ಹೊಂದಿರುವ ಸರಕು ಸಾಗಣೆ ವೀಕ್ಷಿಸಲು ಕಾಯುತ್ತಿದ್ದು, ಇಲ್ಲಿ ಜನಸಂದಣಿ ನಿಯಂತ್ರಿಸಲು ಪಿಂಕ್ ಪ್ಯಾಟ್ರೋಲ್ ಸ್ಕ್ವಾಡ್ ಸೇರಿದಂತೆ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಪಿಂಕ್ ಗಸ್ತು ವಾಹನ ಆಕೆಯ ತಂದೆಯ ಸ್ಕೂಟರ್ನಿಂದ 3 ಮೀಟರ್ ದೂರದಲ್ಲಿ ನಿಂತಿತ್ತು. ಬಾಯಾರಿದ ಅವರಿಬ್ಬರು ನೀರು ಕುಡಿಯುವುದಕ್ಕೆ ಹತ್ತಿರದ ಅಂಗಡಿಗೆ ಹೋಗಿದ್ದು, ಪೊಲೀಸರು ಅವರ ಬಳಿಗೆ ಧಾವಿಸಿ ಕದ್ದಿರುವ ಮೊಬೈಲ್ ಫೋನ್ ಹಿಂದಿರುಗಿಸುವಂತೆ ಇಬ್ಬರನ್ನು ಒತ್ತಾಯಿಸಿದ್ದಾರೆ.
ಇನ್ನು ಮೊಬೈಲ್ ನಾವು ಕಳವು ಮಾಡಲಿಲ್ಲ ಎಂದು ಬಾಲಕಿ ಅವಳ ತಂದೆ ಹೇಳಿದಾಗ, ಪೊಲೀಸರು, ಅವರ ಚರ್ಮದ ಬಣ್ಣ, ದೇಹದ ವಾಸನೆ ಬಗ್ಗೆ ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿ ಅವಮಾನಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ದೂರಿನ ಪ್ರಕಾರ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೈಹಿಕ ಪರೀಕ್ಷೆಗೆ ಒಳಪಡಿಸುವ ಬೆದರಿಕೆ ಹಾಕಲಾಗಿದ್ದು, ಇದರಿಂದ ಬೆದರಿದ ಬಾಲಕಿ ತನ್ನ ಸುತ್ತಲೂ ಒಂದು ದೊಡ್ಡ ಗುಂಪು ಸೇರುವುದನ್ನು ನೋಡಿ ಭಯ, ಅವಮಾನ ಮತ್ತು ತೀವ್ರ ಮಾನಸಿಕ ಸಂಕಟಕ್ಕೆ ಒಳಗಾಗಿದ್ದಾಳೆ.
ಇನ್ನು ಪೊಲೀಸ್ ಅಧಿಕಾರಿ ನಡೆಸಿದ ಈ ಹಿಂಸಾತ್ಮಕ ಕೃತ್ಯಕ್ಕೆ ಪ್ರತಿಯಾಗಿ ಸಾರ್ವಜನಿಕ ಕಾನೂನು ಪರಿಹಾರ ಎಂದು ಪರಿಗಣಿಸಿ ರಾಜ್ಯ ಸರ್ಕಾರವು 50,00,000 ರೂಪಾಯಿಗಳ ಪರಿಹಾರವನ್ನು ಪಾವತಿಸುವ ಜವಾಬ್ದಾರಿ ಹೊಂದಿದೆ ಎಂದು ಬಾಲಕಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.