ಬೆಂಗಳೂರು, ನ.19 (DaijiworldNews/PY): "ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ವರದಿ ಆತಂಕಕಾರಿ. ಸರ್ಕಾರ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ವರದಿ ಆತಂಕಕಾರಿ. ಒಂದೆಡೆ ಬಡತನವನ್ನು ಹೆಚ್ಚಿಸಿ, ಮತ್ತೊಂದೆಡೆ ಶೈಕ್ಷಣಿಕ ಕ್ಷೇತ್ರವನ್ನು ಕಡೆಗಣಿಸಿರುವ ಬಿಜೆಪಿ ಸರ್ಕಾರವೇ ಇದಕ್ಕೆ ನೇರ ಹೊಣೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಶಿಕ್ಷಣದಿಂದ ವಿಮುಖರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಯಾವುದೇ ಯೋಜನೆ ರೂಪಿಸದ ಸರ್ಕಾರ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿದೆ" ಎಂದಿದೆ.
"ನಿರಂತರ ಒಂದು ವರ್ಷದ ಹೋರಾಟ ನಡೆಸಿದ ರೈತರು ಗೆಲುವು ಸಾಧಿಸಿದ್ದಾರೆ, ಸ್ವತಂತ್ರೋತ್ತರ ಭಾರತದ ಈ ಐತಿಹಾಸಿಕ ಹೋರಾಟದ ಗೆಲುವನ್ನು 700ಕ್ಕೂ ಹೆಚ್ಚು ಹುತಾತ್ಮ ರೈತರಿಗೆ ಅರ್ಪಿಸೋಣ" ಎಂದು ತಿಳಿಸಿದೆ.
"ರೈತರ ಹೋರಾಟದ ಮುಂದೆ ಕೇಂದ್ರ ಬಿಜೆಪಿ ಸರ್ಕಾರ ಮಂಡಿಯೂರಿದೆ. ಮಾರಕ ಕಾಯ್ದೆಗಳ ವಿರುದ್ದ ಪ್ರತಿ ರೈತರೂ ಯೋಧನಂತೆ ಹೋರಾಡಿ ಗೆಲುವು ಪಡೆದಿದ್ದಾರೆ. ಇದು ಅನ್ನದಾತರು ಹಾಗೂ ಕಾಂಗ್ರೆಸ್ಗೆ ಸಂದ ಐತಿಹಾಸಿಕ ವಿಜಯವಾಗಿದೆ" ಎಂದು ಹೇಳಿದೆ.
"ಈ ಹೋರಾಟದಲ್ಲಿ ಪ್ರಾಣತೆತ್ತ 700ಕ್ಕೂ ಅಧಿಕ ರೈತರ ಬಲಿದಾನವನ್ನು ಇದೇ ಸಂದರ್ಭದಲ್ಲಿ ಸ್ಮರಿಸೋಣ" ಎಂದು ತಿಳಿಸಿದೆ.