ಬೆಂಗಳೂರು, ನ.19 (DaijiworldNews/PY): "ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕುಟುಂಬದ ಮತ್ತೋರ್ವ ಸದಸ್ಯ ಸೂರಜ್ ರೇವಣ್ಣ ರಾಜಕೀಯ ಎಂಟ್ರಿಗೆ ಬಿಜೆಪಿ ವ್ಯಂಗ್ಯವಾಡಿದ್ದು, ಕುಟುಂಬ ರಾಜಕಾರಣದಲ್ಲೂ ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಹೆಚ್ಡಿ ದೇವೇಗೌಡರದು ಒಂದು ಆದರ್ಶ ಕುಟುಂಬ" ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಕುಟುಂಬ ರಾಜಕಾರಣದಲ್ಲೂ ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಹೆಚ್ಡಿ ದೇವೇಗೌಡರದು ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು" ಎಂದು ತಿಳಿಸಿದೆ.
"ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡರ ಕುಟುಂಬದ ಎಲ್ಲಾ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ರೇವಣ್ಷ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕುಟುಂಬದ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ" ಎಂದು ಹೇಳಿದೆ.
"ಪಕ್ಷಕ್ಕೋಸ್ಕರ ನೀವು ದುಡಿಮೆ ಮಾಡಿ. ಅಧಿಕಾರವೂ ನಿಮ್ಮದೇ ಆಗಿರುತ್ತದೆ ಎಂದು ಈ ಹಿಂದೆ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಬಹುಷಃ, ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್ ನೀಡಲಾಗಿದೆ" ಎಂದು ಲೇವಡಿ ಮಾಡಿದೆ.