ಬೆಂಗಳೂರು, ನ.19 (DaijiworldNews/PY): "ದೇವರ ಆಶೀರ್ವಾದಿಂದ ಹಾಗೂ ಜನಾಶೀರ್ವಾದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, "ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಬೆಂಬಲ ಲಭಿಸಿದೆ. ಈ ಯಾತ್ರೆಗೆ ವರುಣದೇವನ ಆಶೀರ್ವಾದ ಲಭಿಸಿದೆ. ವಿಧಾನಪರಿಷತ್ನಲ್ಲಿ ಬಿಜೆಪಿಯ ಬಲ ಹೆಚ್ಚಾಗಬೇಕಿದೆ" ಎಂದಿದ್ದಾರೆ.
"ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯು ಸ್ವರ್ಣ ಗ್ರಾಮ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಧ್ವನಿ ಎತ್ತುವ ಬಿಜೆಪಿ ಅಭ್ಯರ್ಥಿಗಳಿಗೆ ನಿಮ್ಮ ಮತ ಚಲಾಯಿಸಿ. ಕೇರಳ ಮಾದರಿಯ ಪಂಚಾಯತ್ ವ್ಯವಸ್ಥೆಯನ್ನು ಇಲ್ಲಿಯೂ ಅನುಷ್ಠಾನಕ್ಕೆ ತರಲು ಚಿಂತಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಕರ್ನಾಟಕವು ಕಾಂಗ್ರೆಸ್ ಮುಕ್ತವಾಗುತ್ತಾ ನಡೆದಿದೆ. ಬಿಜೆಪಿ ಪಾಲಿಕೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ 150 ಶಾಸಕ ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೇರಲಿದೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು, ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಮಾಡುವ ಮಹಾತ್ಮ ಗಾಂಧಿ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ಕಾಂಗ್ರೆಸ್ಸಿಗರು ಕೇವಲ ವ್ಯಾಪಾರ ಮಾಡಿದ್ದುಮ ಭ್ರಷ್ಟಾಚಾರಕ್ಕೆ ಒತ್ತು ನೀಡಿದರು" ಎಂದು ತಿಳಿಸಿದ್ದಾರೆ.