ತ್ರಿಪುರಾ, ನ.19 (DaijiworldNews/PY): ಬಿಜೆಪಿ ಹಾಗೂ ಟಿಎಂಸಿ ಬೆಂಬಲಿಗರ ಮಧ್ಯೆ ಭಾರಿ ಘರ್ಷಣೆ ನಡೆದ ಪರಿಣಾಮ 19 ಮಂದಿ ಗಾಯಗೊಂಡಿರುವ ಘಟನೆ ತ್ರಿಪುರಾದ ಖೋವೈ ಜಿಲ್ಲೆಯ ತೆಲಿಯಮುರಾದಲ್ಲಿ ನಡೆದಿದೆ.
ಗಾಯಗೊಂಡವರ ಪೈಕಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಸೇರಿದ್ಧಾರೆ ಎಂದು ತಿಳಿದುಬಂದಿದೆ.
"ರಾಜ್ಯದಲ್ಲಿ ಪೌರ ಸಂಸ್ಥೆಗಳ ಚುನಾವಣೆಗೆ ಕೆಲವು ದಿನಗಳ ಮುನ್ನ ಈ ಘರ್ಷಣೆ ನಡೆದಿದ್ದು, ತೆಲಿಯಮುರಾ ಪುರಸಭೆಯ ಹಲವು ವಾರ್ಡ್ಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ" ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಮಹಾನಿರೀಕ್ಷಕ ಸುಬ್ರತಾ ಚಕ್ರವರ್ತಿ, "ಕಲಿಟಿಲಾ ಪ್ರದೇಶದಲ್ಲಿ ನ.17ರ ಬುಧವಾರ ರಾತ್ರಿ 9.30ರ ಸುಮಾರಿಗೆ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಂದರ್ಭ ಬಿಜೆಪಿ ಕಚೇರಿ ಬಳಿ ಬಂದಾಗ ಘರ್ಷಣೆ ಪ್ರಾರಂಭವಾಗಿದೆ" ಎಂದಿದ್ದಾರೆ.