ರಾಯಚೂರು, ನ.19 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೇ ಹುಚ್ಚು ಹಿಡಿದಿದೆ. ಹುಚ್ಚು ಹಿಡಿದವರಿಗೆ ಎಲ್ಲವೂ ಹುಚ್ಚಾಗಿ ಕಾಣಿಸುತ್ತದೆ" ಎಂದು ಡಿ ಕೆ ಶಿವಕುಮಾರ್ ಅವರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಸಿರವಾರ ಪಟ್ಟಣದ ಚುಕ್ಕಿ ಸಭಾಂಗಣದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, "ಡಿಕೆಶಿ ಅವರು ರಾಜಕೀಯಕ್ಕೆ ಹೇಗೆ ಬಂದಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ರೌಡಿ ಶೀಟರ್ ರಾಮಚಂದ್ರ ಕೊತ್ವಾಲ್ ಅವರೊಂದಿಗೆ ಸೇರಿ ರಾಜಕೀಯ ಆರಂಭಿಸಿದ್ದಾರೆ. ಆದರೆ, ನಾನು ಬಡವರೊಂದಿಗೆ ಬೆಳೆದು, ಸಿದ್ದಾಂತದ ಮುಖೇನ ರಾಜಕೀಯಕ್ಕೆ ಬಂದಿದ್ದೇನೆ" ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶ್ರೀಕಿ ಬಂಧನ ಮಾಡಿದರೆ ಕಾಂಗ್ರೆಸ್ ಆಯಕರು ವಿನಾಕಾರಣ ಆರೋಪ ಮಾಡಿದ್ದಾರೆ. ಶ್ರೀಕಿಯನ್ನು 2018ರಲ್ಲಿ ಏಕೆ ಬಂಧಿಸಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ವಿಧಾನಸಭೆಯಲ್ಲಿ ಜನಪರ ಕಾಯ್ದೆಗಳು ಪಾಸಾಗುತ್ತೆ. ಆದರೆ ಬಿಜೆಪಿಗೆ ಪರಿಷತ್ನಲ್ಲಿ ಬಹಮತವಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಜನಪರ ಕಾಯ್ದೆಗಳು ಜಾರಿ ಆಗುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಇಂದು ದೇಶ ಬದಲಾಗಿದೆ" ಎಂದಿದ್ದಾರೆ.