ಬೆಂಗಳೂರು, ನ.19 (DaijiworldNews/HR): ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ & ಈಗ ಏಕಾಎಕಿ ರದ್ದತಿ ಅನೇಕ ಪ್ರಶ್ನೆ ಹುಟ್ಟುಹಾಕಿದೆ" ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ & ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನಧಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದರು" ಎಂದರು.
ಇನ್ನು "ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ. ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಾ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು" ಎಂದಿದ್ದಾರೆ.
"ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಕಡೆ ರೈತರ ವಿರುದ್ಧ ನಡೆದಿರುವ ದೌರ್ಜನ್ಯಕ್ಕೆ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕ್ಷಮೆ ಯಾಚನೆ ಮಾಡಬೇಕಿತ್ತು. ಈಗಲಾದರೂ ರೈತರ ಮೇಲೆ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂಬುದು ನನ್ನ ಒತ್ತಾಯ" ಎಂದು ಹೇಳಿದ್ದಾರೆ.