ಹುಬ್ಬಳ್ಳಿ, ನ.19 (DaijiworldNews/PY): "ರೈತರ ಹಿತಕ್ಕಾಗಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗಿದೆ. ಇದರಲ್ಲಿ ಸೋಲು ಗೆಲುವಿನ ಪ್ರಶ್ನೆ ಇಲ್ಲ" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದು, ಇದು ರೈತರ ಒಳಿತಿನ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ" ಎಂದಿದ್ದಾರೆ.
"ಕೃಷಿ ಕಾಯ್ದೆಯಲ್ಲಿ ಯಾವುದೇ ಲೋಪ ದೋಷ ಇಲ್ಲ ಎಂದು ಹೇಳಿದ್ದು ನಿಜ. ಯಾವುದೇ ಚುನಾವಣೆಗಳನ್ನು ಮುಂದಿಟ್ಟುಕೊಂಡು ಕಾಯ್ದೆಗಳನ್ನು ವಾಪಾಸ್ಸು ಪಡೆದಿಲ್ಲ. ತಡವಾದರೂ ಕೂಡಾ ಇದೊಂದು ಐತಿಹಾಸಿಕ ತೀರ್ಮಾನವಾಗಿದೆ" ಎಂದು ಹೇಳಿದ್ದಾರೆ.
"ಉತ್ತರಪ್ರದೇಶ ಚುನಾವಣೆಯ ಹಿನ್ನೆಲೆ ಕೃಷಿ ಕಾಯ್ದೆಯನ್ನು ವಾಪಾಸ್ಸು ಪಡೆಯಲಾಗಿದೆ ಎನ್ನುವ ವಿಚಾರ ಸುಳ್ಳು. ಈಗಾಗಲೇ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯಲಿದ್ದು, ಸಾಮೂಹಿಕ ನಾಯಕತ್ವಕ್ಕೆ ಪಕ್ಷದಲ್ಲಿ ಹೆಚ್ಚಿನ ಗೌರವವಿದೆ" ಎಂದಿದ್ದಾರೆ.