ನವದೆಹಲಿ, ನ.19 (DaijiworldNews/PY): "ಒಂದೂವರೆ ವರ್ಷದ ಸುದೀರ್ಘ ಹೋರಾಟದ ನಂತರ ರೈತರ ಪ್ರತಿಭಟನೆಗೆ ಜಯ ಸಂದಿರುವುದು ಸಮಾಧಾನಕರ ಸಂಗತಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
"ರೈತರ ಹೋರಾಟಕ್ಕೆ ಮಣಿದಿರುವ ಕೇಂದ್ರದ ಸರ್ಕಾರ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದಿದ್ದು, ದೇಶದ ರೈತರ ಹಾಗೂ ಕಾಂಗ್ರೆಸ್ನ ಹೋರಾಟಕ್ಕೆ ಸಿಕ್ಕ ಚಾರಿತ್ರಿಕ ಜಯ" ಎಂದಿದ್ದಾರೆ.
"ಒಂದೂವರೆ ವರ್ಷದ ಸುದೀರ್ಘ ಹೋರಾಟದ ನಂತರ ರೈತರ ಪ್ರತಿಭಟನೆಗೆ ಜಯ ಸಂದಿರುವುದು ಸಮಾಧಾನಕರ ಸಂಗತಿ. ಇದು ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಂತಿರುವ ಗಾಂಧೀಜಿ ಅವರ ಆದರ್ಶಗಳಿಗೆ ಸಿಕ್ಕಿದ ಗೆಲುವು ಕೂಡ ಹೌದು. ಈ ಸುದೀರ್ಘ ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರನ್ನು ಹುತಾತ್ಮರು ಎಂದು ಸರ್ಕಾರ ಒಪ್ಪಿಕೊಳ್ಳಬೇಕು. ಜೊತೆಗೆ ಅವರ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಬೇಕು" ಎಂದು ಆಗ್ರಹಿಸಿದ್ದಾರೆ.
"ಹೋರಾದಲ್ಲಿ ಭಾಗವಹಿಸಿದ ಪ್ರತಿಯೋರ್ವರ ರೈತನೂ ದೇಶದ ರಕ್ಷಣೆಯಲ್ಲಿ ಯೋಧನಂತೆ ಕಾರ್ಯ ನಿರ್ವಹಿಸಿದ್ದಾರೆ. ಇದು ದುಷ್ಟ ಮನಸ್ಥಿತಿಗೆ ಸಿಕ್ಕ ಗೆಲುವು. ಸರ್ವಾಧಿಕಾರಿ ಧೋರಣೆ ವಿರುದ್ದ ದೊರೆತ ಗೆಲುವು" ಎಂದಿದ್ದಾರೆ.
"ಕೃಷಿ ಕಾಯ್ದೆ ವಿರುದ್ದ ಸಾವಿರಾರು ರೈತರು ಪ್ರತಿಭಟನೆ ನಡೆಸಿದ್ದು, ಈ ಹೋರಾಟದಲ್ಲಿ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಇದೀಗ ಕೇಂದ್ರ ಸರ್ಕಾರ ರೈತರ ಮುಂದೆ ಮಂಡಿಯೂರಿದೆ. ದೇಶದ ಅನ್ನದಾತರನ್ನು ಎದುರುಹಾಕಿಕೊಂಡು ಉಳಿದವರಿಲ್ಲ. ಬ್ರಿಟೀಷರು ಅಂದು ರೈತರ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಕಾಲ್ಕಿತ್ತರು. ಬಿಜೆಪಿ ಇಂದು ಅದೇ ತಪ್ಪು ಮಾಡಿ ಬುದ್ದಿ ಕಲಿತಿದೆ" ಎಂದು ತಿಳಿಸಿದ್ದಾರೆ.
"ರೈತರ ಹಿತದೃಷ್ಟಿಯ ಕಾರಣದಿಂದ ಕಾಂಗ್ರೆಸ್ ಸಹ ಈ ಹೋರಾಟವನ್ನು ಬೆಂಬಲಿಸಿತ್ತು. ಇನ್ನು ಮುಂದಾದರೂ ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಮನಃಸ್ಥಿತಿಯನ್ನು ಬಿಟ್ಟು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದನ್ನು ನಿಲ್ಲಸಬೇಕು. ದೇಶ ಹಾಗೂ ರೈತರ ಹಿತದೃಷ್ಟಿಯ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಬೇಕು" ಎಂದಿದ್ದಾರೆ.
"ಅನ್ನದಾತರು ಸೇರಿದಂತೆ ಎಲ್ಲಾ ವರ್ಗದವರೊಂದಿಗೆ ಕಾಂಗ್ರೆಸ್ ಎಂದಿಗೂ ಇರಲಿದೆ. ಒಂದು ವೇಳೆ ಅವರ ಹಿತಾಸಕ್ತಿಗೆ ಧಕ್ಕೆಯಾದಲ್ಲಿ ಹೋರಾಟ ನಡೆಸಲಿದೆ" ಎಂದು ಹೇಳಿದ್ದಾರೆ.