ನವದೆಹಲಿ, ನ.19 (DaijiworldNews/PY): "ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದಾಗುವ ತನಕ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ" ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪ್ರತಿಭಟನೆಯನ್ನು ತಕ್ಷಣವೇ ಹಿಂಪಡೆಯುವುದಿಲ್ಲ. ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್ಪಿ ಜೊತೆಗೆ ಸರ್ಕಾರವು ರೈತರ ಇತರ ಸಮಸ್ಯೆಗಳನ್ನು ಚರ್ಚಿಸಬೇಕು" ಎಂದಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ರೈತರು ತಮ್ಮ ಪ್ರತಿಭಟನೆಯನ್ನು ವಾಪಾಸು ಪಡೆದು ತಮ್ಮ ಹೊಲಗಳಿಗೆ ಹಿಂತಿರುಗಿ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮನವಿ ಮಾಡಿದ್ದಾರೆ.
"ಕೃಷಿ ಕಾನೂನುಗಳ ಬಗ್ಗೆ ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ. ನಿಜವಾದ ಹಾಗೂ ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ. ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತೇವೆ" ಹೇಳಿದ್ದಾರೆ.
ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು.