ತಿರುಪತಿ, ನ.19 (DaijiworldNews/PY): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತಿರುಪತಿ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಅನಾಹುತ ಉಂಟಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಭಾರಿ ಮಳೆಯಾಗುತ್ತಿದ್ದು, ತಿರುಮಲ ಬೆಟ್ಟ, ಘಾಟ್ ರಸ್ತೆ ಬಂದ್ ಆಗಿದೆ. ಬಹುತೇಕ ಕಡೆಗಳಲ್ಲಿ ಮರಗಳು ಬಿದ್ದಿವೆ, ಗುಡ್ಡಗಳು ಕುಸಿಯುತ್ತಿವೆ. ದೇವಸ್ಥಾನಗಳಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಭಕ್ತರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಪ್ರವಾಹದಿಂದಾಗಿ ಯಾತ್ರಾರ್ಥಿಗಳು ಹೊರಬರಲಾಗದೆ ದೇವರ ದರ್ಶನ ಸ್ಥಗಿತಗೊಂಡಿದೆ. ತಿರುಮಲದ ಜಪಾಲಿ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತಗೊಂಡಿದ್ದು, ದೇವರ ವಿಗ್ರಹ ಮುಳುಗಿದೆ.
ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಪವಿತ್ರ ಬೆಟ್ಟಗಳಲ್ಲಿ ಸಿಲುಕಿರುವ ಯಾತ್ರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದಾರೆ. ಇನ್ನು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಜವಾಹರರೆಡ್ಡಿ ಅವರು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಗೆ ಶುಕ್ರವಾರ ರಜೆ ಘೋಷಿಸಿದ್ದಾರೆ.
ಅಲಿಪಿರಿಯಿಂದ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಮೆಟ್ಟಿಲನ್ನು ಸಹ ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ರೇಣಿಗುಂಟಾದಲ್ಲಿರುವ ತಿರುಪತಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಜಲಾವೃತವಾಗಿದ್ದು,ದೆಹಲಿಯಿಂದ ತಿರುಪತಿಗೆ ಬರಬೇಕಿದ್ದ ವಿಮಾನವನ್ನು ರದ್ದುಪಡಿಸಲಾಗಿದೆ. ಹೈದರಾಬಾದ್ ಮತ್ತು ಬೆಂಗಳೂರಿನಿಂದ ತಿರುಪತಿಗೆ ಬಂದಿಳಿಯಬೇಕಿದ್ದ ಎರಡು ಪ್ರಯಾಣಿಕರ ವಿಮಾನಗಳನ್ನು ವಾಪಾಸ್ ಕಳುಹಿಸಲಾಗಿದೆ.
ಸ್ವರ್ಣಮುಖಿ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದುಮ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಸ್ಥಳೀಯ ಆಡಳಿತ ನಿರತವಾಗಿದೆ. ಆಂಧ್ರಪ್ರದೇಶ ಸರ್ಕಾರ ತುರ್ತು ಸಭೆ ಕರೆದು ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಚರ್ಚಿಸಿದೆ.
ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ, ಆಹಾರ ಸಾಮಗ್ರಿ ಪೂರೈಕೆ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ತಂಡಗಳನ್ನು ರಚಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೆರಡು ದಿನ ಹೀಗೆ ಮಳೆ ಮುಂದುವರಿಯಲಿದೆ ಎಂದ ಹವಾಮಾನ ಇಲಾಖೆ ವರದಿ ನೀಡಿದೆ.
ಭಾರಿ ಮಳೆ ಹಾಗೂ ಪ್ರವಾಹದ ಪರಿಣಾಮ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇಂದು ನಡೆಯಬೇಕಿದ್ದ ಕಾರ್ತಿಕ ದೀಪೋತ್ಸವ ವಿಶೇಷ ಪೂಜಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಕುರಿತು ತುರ್ತು ಸಭೆ ನಡೆಸಿದ ತಿರುಪತಿ ಆಡಳಿತ ಮಂಡಳಿ ದೀಪೋತ್ಸವವನ್ನು ಮುಂದೂಡಿದೆ.
ನೀರಿನ ರಭಸಕ್ಕೆ ಹಲವು ವಾಹನಗಳು ಕೊಚ್ಚಿ ಹೋಗಿವೆ. ರಸ್ತೆಯಲ್ಲಿದ್ದ ಬಸ್ಗಳು ಬಹುತೇಕ ಮುಳುಗಿ ಹೋಗಿವೆ. ಭಾರಿ ಮಳೆಯ ಪರಿಣಾಮ ತಿರುಮಲ, ಚಿತ್ತೂರು ಸೇರಿದಂತೆ ತಿರುಪತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
"ಪ್ರತಿಕೂಲ ಹವಮಾನದ ಹಿನ್ನೆಲೆ ನವದೆಹಲಿಯಿಂದ ತಿರುಪತಿಗೆ ವಿಮಾನವನ್ನು ರದ್ದುಗೊಳಿಸಲಾಗಿದೆ" ಎಂದು ತಿರುಪತಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಸುರೇಶ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.