ನವದೆಹಲಿ, ನ 19 (DaijiworldNews/MS): ದೇಶದಲ್ಲಿ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ರೈತ ಸಮುದಾಯ ಹಾಗೂ ರೈತ ಸಂಘಟನೆಗಳ ಹಾಗೂ ಪ್ರತಿಪಕ್ಷಗಳ ಭಾರೀ ವಿರೋಧ ಹಾಗೂ ವಿವಾದಕ್ಕೆ ಗುರಿಯಾಗಿದ್ದ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಮಸೂದೆಯನ್ನು ಕೊನೆಗೂ ವಾಪಾಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೊದಲು ಗುರುನಾನಕ್ ಜಯಂತಿಯ ಶುಭಾಷಯ ತಿಳಿಸಿದ್ದಾರೆ. ಬಳಿಕ ಮಹತ್ವದ ವಿಚಾರವನ್ನು ಘೋಷಿಸಿದ್ದು , ರೈತರು ತಮ್ಮ ಪ್ರತಿಭಟನೆಯನ್ನು ವಾಪಾಸು ಪಡೆದು ತಮ್ಮ ಹೊಲಗಳಿಗೆ ಹಿಂತಿರುಗಿ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಈ ವೇಳೆ ಮನವಿ ಮಾಡಿದ್ದಾರೆ.
ಕೃಷಿ ಕಾನೂನುಗಳ ಬಗ್ಗೆ ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಬೇಸರವ್ಯಕ್ತಪಡಿಸಿದ್ದು, " ನಿಜವಾದ ಮತ್ತು ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ. ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತೇವೆ" ಹೇಳಿದ್ದಾರೆ.
ನನ್ನ 5 ದಶಕಗಳ ಸಾರ್ವಜನಿಕ ಜೀವನದಲ್ಲಿ ಹತ್ತಿರದಿಂದ ರೈತರ ಸಮಸ್ಯೆಗಳನ್ನು ನೋಡಿದ್ದೇನೆ. ನಮ್ಮ ದೇಶದಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು ಅದರಲ್ಲಿಯೇ ಕಷ್ಟಪಟ್ಟು ದುಡಿದು ತಮ್ಮ ಸಂಸಾರವನ್ನು ನಿರ್ವಹಣೆ ಮಾಡುತ್ತಾರೆ. ಸಣ್ಣ ರೈತರು, ಹಿಡುವಳಿದಾರರಿಗೆ ಸಹಾಯವಾಗಲು ಕೇಂದ್ರ ಸರ್ಕಾರ ವಿಮೆ ಸೌಲಭ್ಯ, ನೇರ ನಗದು ವರ್ಗಾವಣೆಯಂತಹ ಯೋಜನೆಗಳನ್ನು ತಂದಿದೆ. ದೇಶದ ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡುಗಳನ್ನು ನೀಡಲಾಗಿದ್ದು, ಇದರಿಂದ ರೈತರು ಭೂಮಿಯಲ್ಲಿ ಉತ್ಪಾದನೆ ಹೆಚ್ಚಿಸಬಹುದಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು.