ಬೆಂಗಳೂರು, ನ.19 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರ ಬ್ರೈನ್ ವಾಶ್ ಮಾಡುತ್ತಿದ್ದು, ಜೆಡಿಎಸ್ ಅನ್ನು ಮುಗಿಸಬೇಕು ಎನ್ನುವ ಹುನ್ನಾರ ಅವರದ್ದು" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದ ಸದಸ್ಯರನ್ನು ಸಿದ್ದರಾಮಯ್ಯ ಅವರು ಸಂಪರ್ಕಿಸಿದ್ದು, ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ" ಎಂದು ದೂರಿದ್ದಾರೆ.
"ನಮ್ಮ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದು ಬೇಡ. ಜೆಡಿಎಸ್ನಿಂದ ಶಕ್ತಿ ಪಡೆದುಕೊಂಡು ನಮ್ಮ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ. ಪಕ್ಷ ಬಿಡಲು ಯಾರು ಒಂದು ಹೆಜ್ಜೆ ಇಟ್ಟಿದ್ದಾರೆ. ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆ ಎನ್ನುವುದು ತಿಳಿದಿದೆ" ಎಂದಿದ್ದಾರೆ.
"ಅಭ್ಯರ್ಥಿಗಳ ಪಟ್ಟಿಯನ್ನು ನಾನು ಮೊದಲೇ ಪ್ರಕಟಿಸಲಿದ್ದು, ಜನವರಿ 2022ರಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಹೊಸಬರಿಗೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ" ಎಂದು ತಿಳಿಸಿದ್ದಾರೆ.
"ಜೆಡಿಎಸ್ 2004ರ ಚುನಾವಣೆಯಲ್ಲಿ 30-40 ಸ್ಥಾನಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿತ್ತು. 2023ರಲ್ಲಿ ಈ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಪ್ರಯತ್ನಿಸಲಿದೆ" ಎಂದು ಹೇಳಿದ್ದಾರೆ.