ಬೆಂಗಳೂರು, ನ.18 (DaijiworldNews/PY): "ಸರ್ಕಾರ ರೈತರ ನೆರವಿಗೆ ಧಾವಿಸುವ ಜೊತೆಗೆ ಬೆಲೆಯೇರಿಕೆಯಾಗದಂತೆ ಮಾರುಕಟ್ಟೆಯ ಮೇಲೂ ನಿಯಂತ್ರಣ ಸಾಧಿಸಬೇಕು" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಗೆ ಸಾವಿರಾರು ಕೋಟಿ ಬೆಳೆ ನಷ್ಟವಾಗಿದೆ. ಮುಖ್ಯಮಂತ್ರಿಗಳು ನಷ್ಟದ ಸಮೀಕ್ಷೆ ನಡೆಸಿದ್ದೇವೆ, ಪರಿಹಾರಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಬಾಯಿ ಮಾತಲ್ಲಿ ಹೇಳುತ್ತಿದ್ದಾರೆ. ನಿಜವಾಗಿಯೂ ಸಮೀಕ್ಷೆ ನಡೆಸಿದ್ದರೆ ನಷ್ಟದ ಅಂದಾಜು ಎಷ್ಟೆಂದು ಹೇಳಲಿ" ಎಂದು ಒತ್ತಾಯಿಸಿದ್ದಾರೆ.
"ಅತಿವೃಷ್ಟಿಯಿಂದ ಆಹಾರ ಬೆಳೆಗಳು ನೆಲಕಚ್ಚಿ ಹೋಗಿವೆ. ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿದೆ. ಇದರಿಂದ ತರಕಾರಿ, ಹಣ್ಣು ಹಂಪಲುಗಳು ಗ್ರಾಹಕರಿಗೆ ದುಬಾರಿಯಾಗಿವೆ. ಬೆಲೆಯೇರಿಕೆಯಿಂದ ಈಗಾಗಲೇ ಜನ ಬಸವಳಿದು ಹೋಗಿದ್ದಾರೆ. ಈ ಮಧ್ಯೆ ತರಕಾರಿಗಳ ಬೆಲೆಯೂ ಏರಿಕೆಯಾಗಿರುವುದು ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದಂತೆ" ಎಂದಿದ್ದಾರೆ.
"ಅಕಾಲಿಕ ಮಳೆಯ ಅಡ್ಡ ಪರಿಣಾಮ ಕೇವಲ ರೈತರನಷ್ಟೇ ಅಲ್ಲ ಜನಸಾಮಾನ್ಯರಿಗೂ ತಟ್ಟಿದೆ. ಸರ್ಕಾರ ರೈತರ ನೆರವಿಗೆ ಧಾವಿಸುವ ಜೊತೆಗೆ ಬೆಲೆಯೇರಿಕೆಯಾಗದಂತೆ ಮಾರುಕಟ್ಟೆಯ ಮೇಲೂ ನಿಯಂತ್ರಣ ಸಾಧಿಸಬೇಕು. ಜನರಿಗೆ ಅಗತ್ಯವಿರುವ ಧಾನ್ಯಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಮಾರುಕಟ್ಟೆಗೆ ಪೂರೈಸಲಿ. ಅದು ಬಿಟ್ಟು ಬಾಯುಪಚಾರದ ಮಾತುಗಳಿಂದ ಉಪಯೋಗವಿಲ್ಲ" ಎಂದು ತಿಳಿಸಿದ್ದಾರೆ.