ಬೆಂಗಳೂರು, ನ.18 (DaijiworldNews/PY): "ಬಟ್ಟೆಬಿಚ್ಚಿ ತಿರುಗುವವರಿಗೆ ಗಾಂಧಿ ಮೌಲ್ಯದ ಬಗ್ಗೆ ಏನು ಗೊತ್ತು" ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಕೌಟ್ಸ್ ಹಾಗೂ ಗೈಡ್ಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು," ಹೊಟ್ಟೆ ಪಾಡಿಗಾಗಿ ಬಟ್ಟೆಬಿಚ್ಚಿ ತಿರುಗುವವರು ಅವರು. ಅಂತವರ ಕುರಿತು ಇಲ್ಲಿ ಮಾತನಾಡಿದರೆ ಅವರೇ ದೊಡ್ಡವರಾಗುತ್ತಾರೆ. ಬಟ್ಟೆಬಿಚ್ಚಿ ಓಡಾಡುವವರಿಗೆ ಗಾಂಧಿ ಮೌಲ್ಯದ ಬಗ್ಗೆ ಏನು ಗೊತ್ತು?" ಎಂದು ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ವಿರುದ್ದ ಕಿಡಿಕಾರಿದ ಅವರು, "ಈ ದೇಶಕ್ಕೆ ಸ್ವಾತಂತ್ರ್ಯ ಯಾರೂ ಗಿಫ್ಟ್ ಕೊಡಲಿಲ್ಲ. ನೀವು ಏನು ಮಾಡಿದ್ದೀರಿ ಎಂದು ಕೇಳುತ್ತೀರಲ್ಲಾ? ಆಗ ನೀವು ಹುಟ್ಟಿದ್ದೀರಾ?. ಅಂದಿನ ಕಾಂಗ್ರೆಸ್ಗೂ ಇಂದಿನ ಕಾಂಗ್ರೆಸ್ಗೂ ಸಂಬಂಧವೇ ಇಲ್ಲ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ನಾವು ಅದರಿಂದಲೇ ಬಂದವರಲ್ವಾ? ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹೆಡ್ಗೆವಾರ್ ಅವರು 1925ರಲ್ಲಿ ಆರ್ಎಸ್ಎಸ್ ಸ್ಥಾಪಿಸಿದ್ದರು. ಸ್ವಾತಂತ್ರ್ಯಕ್ಕಾಗಿ ಇಡೀ ದೇಶವೇ ಹೋರಾಡುತ್ತಿದ್ದರೆ ಇವರು ಆರ್ಎಸ್ಎಸ್ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿದರು. 2023 ರೊಳಗೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದೇ ಆರ್ಎಸ್ಎಸ್ನ ಘೋಷಣೆ" ಎಂದಿದ್ದಾರೆ.