ಕಾರವಾರ, ನ.18 (DaijiworldNews/PY): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನಮನ್ನಣೆ ಸಿಗುತ್ತಿಲ್ಲ. ಆದರೆ, ಅವರು ಹೊರ ದೇಶಕ್ಕೆ ಏಕೆ ಹೋಗಿ ಬರುತ್ತಾರೆ ಎಂದು ಅರ್ಥವಾಗುತ್ತಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಯಲ್ಲಾಪುರದಲ್ಲಿ ಬಿಜೆಪಿ ಹಮ್ಮಿಕೊಂಡ ಜನಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ಹಡಗಿನಲ್ಲಿ ಯಾರೂ ಕೂಡಾ ಕೂರಲು ಬಯಸುವುದಿಲ್ಲ. ಈಗ ಕಾಂಗ್ರೆಸ್ ಲೋಕಸಭೆಯಲ್ಲಿ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದೆ. ಇನ್ನು 25 ವರ್ಷ ಕಳೆದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುವುದು ಬೇಡ" ಎಂದಿದ್ದಾರೆ.
"ವಿಧಾನಸಭೆ ಚುನಾವಣೆ ಮುಗಿದ ನಂತರ ಮತ್ತೆ ರಾಜ್ಯ ಪ್ರವಾಸ ಹಮ್ಮಿಕೊಳ್ಳುತ್ತೇನೆ. ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದಾಗ ಜನರ ಪ್ರೀತಿಯನ್ನು ಕಂಡು ಕಣ್ಣೀರು ಹಾಕಿದ್ದೆ. ಆದರೆ, ಅದನ್ನು ಕೆಲವರು ಟೀಕಿಸಿದ್ದರು. ನಾನು ಮಾಜಿ ಸಿಎಂ ಆಗಿದ್ದರೂ ಕೂಡಾ ಜನರ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ" ಎಂದು ತಿಳಿಸಿದ್ದಾರೆ.
"ವಿಧಾನ ಪರಿಷತ್ನಲ್ಲಿ ಯಾವ ಕ್ಷೇತ್ರಗೆಲ್ಲಲು ಸಾಧ್ಯವಾಗಲಿಲ್ಲವೋ ಈ ಬಾರಿ ಅಲ್ಲಿ ಗೆಲುವು ಸಾಧಿಸಬೇಕು ಎಂದು ಉತ್ತರ ಕನ್ನಡ ಕ್ಷೇತ್ರದಿಂದ ಪ್ರವಾಸ ಪ್ರಾರಂಭಿಸಿದ್ಧೇನೆ. ಪ್ರತಿಯೋರ್ವರು ತಾವೇ ಅಭ್ಯರ್ಥಿ ಎಂದು ಕೆಲಸ ಮಾಡಿದ್ದಲ್ಲಿ ಪಕ್ಷ ಗೆಲುವು ಸಾಧಿಸುತ್ತದೆ" ಎಂದಿದ್ದಾರೆ.