ಕಾರವಾರ, ನ.18 (DaijiworldNews/HR): ಬಿಜೆಪಿಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಾರಿಗೆ ಸಚಿವ ಶ್ರೀರಾಮುಲು, ನಿಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಮೊದಲು ಅದನ್ನು ತೆಗೆಯಿರಿ" ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಸೋತಾಗ ಆಡಳಿತ ವಿರೋಧಿ ಅಲೆಯಿದೆ, ಕಾಂಗ್ರೆಸ್ ಗೆಲುವಿನ ಸುನಾಮಿ ಆಗ್ತದೆ ಎಂದರು. ಎಂಥ ಸುನಾಮಿ, ಬಿರುಗಾಳಿ ಬೀಸಿದರೂ ಎದುರಿಸುವ ಶಕ್ತಿ ಬಿಜೆಪಿಗಿದೆ. ಆ ಅಲೆಯಲ್ಲಿ ಕಾಂಗ್ರೆಸ್ ಒಡೆದು ಹೋಗುತ್ತದೆ" ಎಂದರು.
ಇನ್ನು "ಕಳೆದ ಬಾರಿ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು 1,600 ಮತಗಳಿಂದ ಗೆದ್ದಿದ್ದು, ಅದೂ ಎಣಿಕೆ ಸಂದರ್ಭದಲ್ಲಿ ಮೋಸದಿಂದ ಗೆದ್ದುಕೊಂಡರು. ಮುಖ್ಯಮಂತ್ರಿಯಾಗಿದ್ದವರು ಅಷ್ಟು ಅಂತರದಲ್ಲಿ ಗೆಲ್ಲುವುದು ದೊಡ್ಡ ವಿಚಾರವಲ್ಲ. ಮುಂದೆ ಅವರು ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಕಾಂಗ್ರೆಸಿಗರೇ ಸುನಾಮಿ ರೀತಿಯಲ್ಲಿ ಕೆಲಸ ಮಾಡಿ ಅವರನ್ನು ಸೋಲಿಸುತ್ತಾರೆ" ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾರ್ಟ್ ಟೈಂ ನಾಯಕ. ದೇಶಕ್ಕೆ ಅವರು ಬೇಕಾ ಅಥವಾ ಫುಲ್ ಟೈಂ ನಾಯಕ ಮೋದಿ ಬೇಕಾ ಎಂದು ಜನರು ಯೋಚಿಸಬೇಕು ಎಂದು ಹೇಳಿದ್ದಾರೆ.