ನವದೆಹಲಿ, ಅ 18 (DaijiworldNews/MS): ಕೇಂದ್ರ ಸರ್ಕಾರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಕೆಲವು ದಿನಗಳ ಹಿಂದೆ ಅಯೋಧ್ಯೆ ತೀರ್ಪು ಕುರಿತು ಪುಸ್ತಕವೊಂದನ್ನು ಹೊರತಂದಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ‘ಸನ್ರೈಸ್ ಓವರ್ ಅಯೋಧ್ಯೆ’ ಪುಸ್ತಕದ ಬಗ್ಗೆ ಹಲವರು ದಂಗೆಯೆದ್ದಿದ್ದಾರೆ. ಈ ನಡುವೆ ಈ ಪುಸ್ತಕದ ಪ್ರಸಾರ, ಪ್ರಕಟಣೆ, ವಿತರಣೆ ಮತ್ತು ಮಾರಾಟದ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ನ್ಯಾಯಾಲಯ ಬುಧವಾರ ನಿರಾಕರಿಸಿದೆ.
ತಡೆಯಾಜ್ಞೆಯಿಂದ ಪ್ರಕಾಶಕರಿಗೆ ತೊಂದರೆ ಉಂಟಾಗಲಿದ್ದು ಲೇಖಕರ ವಾಕ್ ಮತ್ತು ಅಭಿವ್ಯಕ್ತಿಯ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪುಸ್ತಕದಲ್ಲಿನ ಒಂದು ಅಂಶ ಹಿಂದೂ ಧರ್ಮ ಅನುಸರಿಸುವ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹಿಂದೂ ಸೇನೆಯ ಅಧ್ಯಕ್ಷರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರತಿವಾದಿಗಳ ವಿರುದ್ಧವಾಗಿ ತಡೆಯಾಜ್ಞೆ ನೀಡಬೇಕು ಮತ್ತು ಸಮಾಜದ ಹಿತಾಸಕ್ತಿಗಾಗಿ ಪುಸ್ತಕ ನಿಷೇಧಿಸುವಂತೆ ಅರ್ಜಿದಾರರು ಕೋರಿದ್ದರು.
ಲೇಖಕ ಮತ್ತು ಪ್ರಕಾಶಕರಿಗೆ ಪುಸ್ತಕ ಬರೆಯುವ ಹಾಗೂ ಪ್ರಕಟಿಸುವ ಹಕ್ಕಿದೆ . ತಡೆಯಾಜ್ಞೆ ನೀಡಿದರೆ ಅದು ಪ್ರಕಾಶಕರಿಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ಲೇಖಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.