ನವದೆಹಲಿ, ನ.18 (DaijiworldNews/PY): "ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರುವ ಪಾಕಿಸ್ತಾನವು ಇಡೀ ಜಗತ್ತಿಗೆ ತಲೆನೋವಾಗಿದೆ" ಎಂದು ಬಿಜೆಪಿಯ ಹಿರಿಯ ನಾಯಕ ರಾಮ್ ಮಾಧವ್ ತಿಳಿಸಿದ್ದಾರೆ.
ಇಲ್ಲಿ ಭಾರತೀಯ-ಅಮೆರಿಕನ್ನರು ಆಯೋಜಿಸಿದ್ದ ಜಾಗತಿಕ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜಗತ್ತಿನಾದ್ಯಂತ ನಡೆದಿರುವ ಎಲ್ಲಾ ಪ್ರಮುಖ ಭಯೋತ್ಪಾದಕ ದಾಳಿಗಳಲ್ಲಿ ಪಾಕಿಸ್ತಾನದವರ ಹೆಜ್ಜೆ ಗುರುತುಗಳಿವೆ. ವಿಶ್ವ ಸಮುದಾಯವು ಜಾಗತಿಕ ಭಯೋತ್ಪಾದನೆಯ ಕೇಂದ್ರವನ್ನು ನಿಭಾಯಿಸುವ ಅಗತ್ಯವಿದೆ" ಎಂದಿದ್ದಾರೆ.
"ಪಾಕಿಸ್ತಾನ ಭಾರತಕ್ಕೆ ಮಾತ್ರ ತಲೆನೋವಲ್ಲ. ಇದು ಇಡೀ ಜಗತ್ತಿಗೆ ತಲೆನೋವಾಗಿದೆ. ಕೈಗವಸು ಕೊಟ್ಟು ಮಕ್ಕಳಿಗೆ ಚಿಕಿತ್ಸೆ ನೀಡುವಂತೆ ಆ ದೇಶಕ್ಕೆ ಚಿಕಿತ್ಸೆ ನೀಡಲು ಅಸಾಧ್ಯ" ಎಂದು ಹೇಳಿದ್ದಾರೆ.
"ಭಯೋತ್ಪಾದಕರನ್ನು ಉತ್ತೇಜಿಸುವ, ರಕ್ಷಿಸುವ ಕಾರ್ಯವನ್ನು ಪಾಕಿಸ್ತಾನ ಮಾಡುತ್ತಿದೆ. ಇದರಿಂದ ಆ ದೇಶವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ. ಆ ದೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕು" ಎಂದಿದ್ದಾರೆ.
"ವಾಷಿಂಗ್ಟನ್ ಡಿಸಿಯಲ್ಲಿನ ಬುದ್ಧಿಜೀವಿಗಳ ಗುಂಪು ಪಾಕಿಸ್ತಾನ ಮತ್ತು ಅದರ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅನ್ನು ರಕ್ಷಿಸುವಲ್ಲಿ ನಿರತವಾಗಿದೆ. ಅವರೇ (ಐಎಸ್ಐ) ಭಯೋತ್ಪಾದಕರು. ಆದರೆ ಅವರು ಅಮೇರಿಕಾದ ಕೆಲವು ಬುದ್ಧಿಜೀವಿಗಳಿಗೆ ಯಶಸ್ವಿಯಾಗಿ ಮನವರಿಕೆ ಮಾಡಿದ್ದಾರೆ. ಆದರೆ ಈ ಭಯೋತ್ಪಾದಕ ಗುಂಪುಗಳು ತಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ" ಎಂದು ತಿಳಿಸಿದ್ದಾರೆ.
"ಕಾಶ್ಮೀರ ಸೇರಿದಂತೆ ಭಾರತದಲ್ಲಿ ಭಯೋತ್ಪಾದನೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದೇವೆ" ಎಂದಿದ್ದಾರೆ.