ಕೊಪ್ಪಳ, ಅ 18 (DaijiworldNews/MS): ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿರುವ ಬಿಟ್ ಕಾಯಿನ್ ಹಗರಣದ ಕುರಿತಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ "ಬಿಟ್ ಕಾಯಿನ್ ಹಗರಣ ಎನ್ನುವುದು ಶುದ್ದ ಸುಳ್ಳು. ಒಂದು ವೇಳೆ ಅದೇನಾದರೂ ನಡೆದಿದ್ದರೆ ಕಾಂಗ್ರೆಸ್ ಅವಧಿಯಲ್ಲೇ ನಡೆದಿರಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಲ" ಎಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಕೊಪ್ಪಳದಲ್ಲಿ ಮಾತನಾಡಿದ ಅವರು "ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಮಾತನಾಡುತ್ತಿದೆ. ಯಾಕೆಂದರೆ ಮೋಸ ಹಾಗೂ ಸುಳ್ಳು ಕಾಂಗ್ರೆಸ್ ರಕ್ತದಲ್ಲೇ ಇದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಧಿವೇಶನದಲ್ಲಿ ಬಿಟ್ ಕಾಯಿನ್ ಬಗ್ಗೆ ಮಾತಾಡಿದ್ದಾರೆ. ಅದು ಬಿಟ್ಟು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವ್ಯಾವುದು ನಡೆದೇ ಇಲ್ಲ "ಎಂದು ನಳಿನ್ ಸ್ಪಷ್ಟಪಡಿಸಿದ್ದಾರೆ.
"ನಲಪಾಡ್ ಹಲ್ಲೆ ಮಾಡಿದ ಪ್ರಕರಣವನ್ನು ಪ್ರಶ್ನೆ ಮಾಡಿದ್ದ ಕುಮಾರಸ್ವಾಮಿ ಅವರು ಬಿಟ್ ಕಾಯಿನ್ ಬಗ್ಗೆಯೂ ಆಗಲೇ ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಬಿಟ್ ಕಾಯಿನ್ ವಿಚಾರ ಈ ಹಿಂದೆ ಇದು ಸದನದಲ್ಲಿ ಚರ್ಚೆಯಾಗಿದೆ. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಾಯಿ ಬಿಡಲಿಲ್ಲ. ತನಿಖೆಯನ್ನೂ ನಡೆಸಲಿಲ್ಲ. ಆಗಲೂ ಅದಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಮಾತನಾಡಲಿಲ್ಲ. ಆದರೆ ಈಗ ಮಾತ್ರ ಪದೇ ಪದೇ ಬಿಟ್ ಕಾಯಿನ್ ವಿಚಾರ ಮಾತನಾಡುತ್ತಿದ್ದಾರೆ.ಈಗಾಗಲೇ ಬಿಟ್ ಕಾಯಿನ್ ಬಗ್ಗೆ ಇಡಿ ಮತ್ತು ಸಿಬಿಐ ಇಂಟರ್ ಪೋಲ್ ಮೂಲಕ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಸತ್ಯ ಗೊತ್ತಾಗುತ್ತದೆ. ತನಿಖೆ ನಡೆಯುವ ವೇಳೆ ಈಗಲೇ ಎಲ್ಲವನ್ನೂ ಹೇಳಲಾಗದು" ಎಂದು ಹೇಳಿದ್ದಾರೆ.