ನವದೆಹಲಿ, ನ.18 (DaijiworldNews/PY): "ಯುವಕರನ್ನು ಕ್ರಿಪ್ಟೋ ಕರೆನ್ಸಿ ಹಾಳು ಮಾಡಬಹುದು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ.
ಸಿಡ್ನಿ ಮಾತುಕತೆಯಲ್ಲಿ ವರ್ಚುವಲ್ ಭಾಷಣ ಮಾಡಿದ ಅವರು, "ಕ್ರಿಪ್ಟೋ ಕರೆನ್ಸಿ ಕೆಟ್ಟವರ ಕೈಗೆ ಹೋಗದಂತೆ ಖಚಿತಪಡಿಸಿಕೊಳ್ಳಬೇಕು. ಪ್ರತಿಯೊಂದನ್ನೂ ಸಹ ಡಿಜಿಟಲ್ ಯುಗ ಬದಲಾಯಿಸುತ್ತದೆ" ಎಂದಿದ್ದಾರೆ.
"ಟೆಲಿಕಾಂ ಕ್ಷೇತ್ರಕ್ಕಾಗಿ 5ಜಿ ಹಾಗೂ 6ಜಿ ಸೇರಿದಂತೆ ದೇಶವು ವಿವಿಧ ಕ್ಷೇತ್ರಗಳಲ್ಲಿ ಆಂತರಿಕ ಸಾಮರ್ಥ್ಯಗಳನ್ನು ಅಭಿವೃದ್ದಿಪಡಿಸುವ ಸಲುವಾಗಿ ಹೂಡಿಕೆ ಮಾಡುತ್ತಿದೆ" ಎಂದು ತಿಳಿಸಿದ್ದಾರೆ.
"ಪ್ರಸ್ತುತ ತಂತ್ರಜ್ಞಾನದ ಮಹತ್ವದ ಉತ್ಪನ್ನ ಎಂದರೆ ದತ್ತಾಂಶ. ಭಾರತದಲ್ಲಿ ನಾವು ದತ್ತಾಂಶ ರಕ್ಷಣೆಯ ಪ್ರಬಲ ಕಾರ್ಯ ಚೌಕಟ್ಟನ್ನು ಸೃಷ್ಟಿಸಿದ್ದೇವೆ. ಅದೇ ಸಂದರ್ಭ ದತ್ತಾಂಶವನ್ನು ಜನತೆಯ ಸಬಲೀಕರಣಕ್ಕಾಗಿ ಬಳಸುತ್ತಿದ್ದೇವೆ" ಎಂದಿದ್ದಾರೆ.
"ದೇಶವು ಬ್ರಾಂಡ್ಬ್ಯಾಂಡ್ನೊಂದಿಗೆ 600,000 ಗ್ರಾಮಗಳನ್ನು ಸಂಪರ್ಕಿಸುವ ಹಾದಿಯಲ್ಲಿ ಮುನ್ನಡೆಯುತ್ತಿದೆ. ವಿಶ್ವದ ಅತ್ಯಂತ ವಿಸ್ತೃತ ಸಾರ್ವಜನಿಕ ಮಾಹಿತಿ ಮೂಲ ಸೌಕರ್ಯವನ್ನು ಭಾರತ ನಿರ್ಮಾಣ ಮಾಡುತ್ತಿದೆ. 1.3 ಶತಕೋಟಿಗೂ ಹೆಚ್ಚಿನ ಭಾರತೀಯರು ವಿಶಿಷ್ಟ ಡಿಜಿಟಲ್ ಗುರುತನ್ನು ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.
"ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಹಕಾರವು ಈ ಪ್ರದೇಶ ಹಾಗೂ ಪ್ರಪಂಚದ ಒಳಿತಿನ ಶಕ್ತಿಯಾಗಿದೆ" ಎಂದಿದ್ದಾರೆ.