ಬೆಂಗಳೂರು, ನ.18 (DaijiworldNews/PY): ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಯುವಕರನ್ನು ಐಸಿಸ್ಗೆ ನೇಮಿಸಿ ಸಿರಿಯಾಗೆ ಕಳುಹಿಸಿ ಉಗ್ರ ಸಂಘಟನೆಯನ್ನು ವಿಸ್ತರಿಸುತ್ತಿದ್ದ ಬೆಂಗಳೂರಿನ ಮತ್ತೋರ್ವ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಉಗ್ರನನ್ನು ನಗರದ ಜುಹಾಬ್ ಹಮೀದ್ ಶಕೀಲ್ ಮುನ್ನಾ ಅಲಿಯಾಸ್ ಜುಹೀಬ್ ಮನ್ನಾ (32) ಎಂದು ಗುರುತಿಸಲಾಗಿದೆ.
ಈತ ನಗರದಲ್ಲಿ ಸಣ್ಣ ವ್ಯಾಪಾರ ಮಾಡಿಕೊಂಡಿದ್ದು, ಈ ಹಿಂದೆ ಬಂಧನಕ್ಕೊಳಗಾದ ಮೊಹಮ್ಮದ್ ತೌಕೀರ್, ಇರ್ಫಾನ್ ನಾಸಿರ್ ಹಾಗೂ ಮೊಹಮ್ಮದ್ ಶಹೀಬ್ ಜೊತೆ ಸೇರಿ ಐಸಿಸ್ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದ.
ಮೊಹಮ್ಮದ್ ತೌಕೀರ್ ಸೂಚನೆಯ ಮೇರೆಗೆ ಉಗ್ರ ಸಂಘಟನೆಗೆ ಯುವಕರ ನೇಮಕ, ಹಣ ಸಂಗ್ರಹ ಹಾಗೂ ಇತರೆ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ತನಗೆ ಪರಿಚಯವಿರುವ ಯುವಕರ ಗುಂಪೊಂದನ್ನು ರಚಿಸಿಕೊಂಡು ದಕ್ಷಿಣ ಭಾರತದ ಮುಸ್ಲಿಂ ಯುವಕರಿಗೆ ಪ್ರಚೋದನೆ ನೀಡಿ ಐಸಿಸ್ ಸಂಘಟನೆಗೆ ನೇಮಿಸುತ್ತಿದ್ದ. ಬಳಿಕ ಅವರನ್ನು ಸಂಘಟನೆಗೆ ಸೇರಿಸಿಕೊಳ್ಳುವಂತೆ ಸಿರಿಯಾಗೆ ಕಳುಹಿಸುತ್ತಿದ್ದ.
ಈತ 10ಕ್ಕೂ ಅಧಿಕ ಮಂದಿ ಯುವಕರನ್ನು ಸಿರಿಯಾಗೆ ಕಳುಹಿಸಿದ್ದಾನೆ ಎಂದು ಎನ್ಐಎ ಮೂಲಗಳು ಹೇಳಿವೆ. 2020ರ ಆ.17ರಂದು ಬೆಂಗಳೂರು ಮೂಲದ ವೈದ್ಯ ಡಾ. ಅಬ್ದರ್ ರೆಹಮಾನ್ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಎನ್ಐಗೆ ಸಿಕ್ಕಿ ಬಿದ್ದಿದ್ದ.
ಈತನ ತಂಡದಲ್ಲಿದ್ದ ಅಹಮ್ಮದ್ ಅಬ್ದುಲ್ ಖಾದರ್ ಹಾಗೂ ಇರ್ಫಾನ್ ನಾಸೀರ್ನನ್ನು ಹತ್ತು ತಿಂಗಳ ಹಿಂದೆ ಬಂಧಿಸಲಾಗಿತ್ತು. ಮೊಹಮ್ಮದ್ ತೌಕೀರ್ನನ್ನು ಕಳೆದ ತಿಂಗಳಷ್ಟೇ ಬಂಧಿಸಲಾಗಿತ್ತು. ಈತನ ಮಾಹಿತಿಯ ಮೇರೆಗೆ ಮುನ್ನಾನನ್ನು ಬಂಧಿಸಲಾಗಿದೆ.