ನವದೆಹಲಿ, ನ.18 (DaijiworldNews/HR): ದೆಹಲಿಯ ಜಗ್ಪುರ ಬಡಾವಣೆಯಲ್ಲಿಇಬ್ಬರು ಮನೆಗೆಲಸದ ಮಹಿಳೆಯರನ್ನು ಹತ್ಯೆಮಾಡಿ 95 ಲಕ್ಷ ದೋಚಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಹತ್ಯೆಗೀಡಾದ ಮನೆಗೆಲಸದ ಮಹಿಳೆಯರನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಮೀನಾ ರಾಯ್(35), ಸುಜೈಲಾ(40) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈ ಪ್ರಕರಣದ ಪ್ರಮುಖ ಸಂಚುಕೋರ ಸಚಿತ್ ಸಕ್ಸೇನಾ ಉತ್ತರ ಪ್ರದೇಶ ಮೂಲದವನಾಗಿದ್ದು, ತನ್ನ ಸಹಚರರಾದ ಪ್ರಶಾಂತ್ ಬಸಿಸ್ತಾ, ಅನಿಕೇತ್ ಝಾ, ರಮೇಶ್ ಮತ್ತು ಧನಂಜಯ್ ಗುಲಿಯಾ ಅವರೊಂದಿಗೆ ಮನೆಯಲ್ಲಿ ದೊಡ್ಡ ಮೊತ್ತದ ನಗದು ಇರುವ ಆಂತರಿಕ ಮಾಹಿತಿಯ ಆಧಾರದ ಮೇಲೆ ದರೋಡೆ ಮಾಡಲು ಸಂಚು ರೂಪಿಸಿದ್ದನು.
ಮಧ್ಯರಾತ್ರಿ 1.30ರ ಸುಮಾರಿಗೆ ಮುಖ್ಯ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿ ದರೋಡೆ ಮಾಡಿದ್ದು, ದರೋಡೆ ಮಾಡಲು ಅವರು ಕೊಠಡಿಗೆ ತೆರಳಿದಾಗ ಮನೆಗೆಲಸದ ಮಹಿಳೆ ಮೀನಾ ರಾಯ್ ಎಚ್ಚರಗೊಂಡಿದ್ದಾರೆ. ಅವರ ಮೂಗಿಗೆ ಕ್ಲೋರೊಫಾರ್ಮ್ ಹಾಕಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಮತ್ತೊಂದು ಕೊಠಡಿಯಲ್ಲಿದ್ದ ಮತ್ತೊಬ್ಬ ಮನೆಗೆಲಸದ ಮಹಿಳೆಯನ್ನೂ ದಿಂಬುಗಳಿಂದ ಕೊಂದಿದ್ದಾರೆ.
ಸಮೀಪದ ಮನೆಗಳಲ್ಲಿ ಹಾಕಲಾಗಿದ್ದ ಸಿಸಿಟಿವಿ ದೃಶ್ಯದಲ್ಲಿ ಈ ಐದೂ ಆರೋಪಿಗಳನ್ನು ಪತ್ತೆಹಚ್ಚಲಾಗಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.