ಗದಗ, ನ.18 (DaijiworldNews/PY): "ಕೋಲಾರದಲ್ಲಿ ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ನ.18ರಂದು ಕರೆದಿರುವ ಕೋಲಾರ್ ಬಂದ್ನಲ್ಲಿ ಭಾಗವಹಿಸದಂತೆ ನನಗೆ ಎಂಟ್ರಿ ಬ್ಯಾನ್ ನೋಟಿಸ್ ನೀಡಲಾಗಿದ್ದು, ಇದು ಬಿಜೆಪಿ ಸರ್ಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ನಂತೆ ಧೋರಣೆಯನ್ನು ಪ್ರದರ್ಶಿಸುತ್ತದೆ" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಅನಾವಶ್ಯಕವಾಗಿ ಇಂದು ಸಂಜೆ 6 ಗಂಟೆಗೆ ಕೋಲಾರ್ ಎಂಟ್ರಿ ಬ್ಯಾನ್ ನೋಟಿಸ್ ಜಾರಿಗೊಳಿಸಿದ್ದು, ಈ ಮೂಲಕ ಸರ್ಕಾರವೇ ದತ್ತ ಮಾಲಾಧಾರಿಗಳ ಹಲ್ಲೆಕೋರರಿಗೆ ಬೆಂಬಲವಾಗಿ ನಿಲ್ಲುತ್ತಿದೆ. ಹಿಂದೂ ನಾಯಕರನ್ನು ತಡೆದರೆ ಅದು ಹಿಂದುತ್ವವನ್ನು ತಡೆದಂತೆ" ಎಂದಿದ್ದಾರೆ.
ದುಷ್ಕರ್ಮಿಗಳ ಗುಂಪೊಂದು ಕಳೆದ ಶನಿವಾರ ರಾತ್ರಿ ರಾಮಸೇನಾ ದತ್ತ ಮಾಲಾಧಾರಿಗಖ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಾಗಾಗಿ ಹಿಂದೂಪರ ಸಂಘಟನೆಗಳು ಕೋಲಾರ ಬಂದ್ಗೆ ಕರೆ ನೀಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿಂದೂಪರ ಸಂಘಟನೆಗಳ ಒಕ್ಕೂಟ, "ಕೋಲಾರ್ ಬಂದ್ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆ ಮಹಾತ್ಮ ಗಾಂಧಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲಾಗುತ್ತದೆ" ಎಂದಿದೆ.