ಬೆಂಗಳೂರು, ನ.17 (DaijiworldNews/PY): "ಬಿಜೆಪಿಯವರಿಗೆ ನಮ್ಮ ಪಕ್ಷದ ವಿಚಾರ ಏಕೆ ಬೇಕು. ಮೊದಲು ಅವರು ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣವನ್ನು ಎತ್ತಿಹಾಕಿ, ಕ್ಲೀನ್ ಮಾಡಿಕೊಳ್ಳಲಿ. ಬಿಜೆಪಿಯವರು ಮೆಂಟಲ್ ಗಿರಾಕಿಗಳು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಪಿಸಿಸಿ ಅಲ್ಪಸಂಖ್ಯಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅರ್ಧಕ್ಕೆ ಭಾಷಣ ನಿಲ್ಲಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರು ಪುನೀತ್ ನಮನ ಕಾರ್ಯಕ್ರಮಕ್ಕೆ 3 ಗಂಟೆಗೆ ಹೋಗಬೇಕಾದ ಕಾರಣದಿಂದ ಚಿಕ್ಕದಾಗಿ ಭಾಷಣ ಮಾಡಿ ಮುಗಿಸಿದರು. ಅದನ್ನು ಮೊದಲೇ ಹೇಳಿದ್ದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಬಳಿಕ ಮಾತನಾಡಿದೆ. ಬಿಜೆಪಿಯವರು ಏನೇನೋ ಮಾತನಾಡುತ್ತಾರೆ. ಅದಕ್ಕೆಲ್ಲಾ ಉತ್ತರ ನೀಡೋಕೆ ಆಗಲ್ಲ. ಸಿಎಂ ಮಾತನಾಡಿದರೆ ಹೇಳಿ ಉತ್ತರಿಸುತ್ತೇನೆ" ಎಂದಿದ್ದಾರೆ.
"ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಾರ್ಯಕರ್ತರ ಮೇಲೆ ನಿಗಾ ಇಡುವುದು ತಪ್ಪೇನೂ ಅಲ್ಲ. ಕೆಲವೊಂದು ಬಾರಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಗುತ್ತದೆ. ಅವರು ನಮ್ಮ ಪಕ್ಷದವರು, ನಮ್ಮವರು, ನಮ್ಮ ಮನೆಯ ಮಕ್ಕಳಿದಂತೆ. ಬೈದರೂ ಕೂಡಾ ಪ್ರೀತಿಯಿಂದ ನೋಡುತ್ತಾರೆ. ಗದರಿದರೂ ಪ್ರೀತಿಸುತ್ತಾರೆ. ಇದು ನಮ್ಮ ಮನೆಯ ವಿಚಾರ" ಎಂದು ಹೇಳಿದ್ದಾರೆ.
ಜಮೀರ್ ಅಹಮದ್ ಖಾನ್ ಅವರು ನಿನ್ನೆ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಇಷ್ಟೆಲ್ಲಾ ಪರಿಸ್ಥಿತಿ ನಿರ್ಮಾಣ ಆಯ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಅದಕ್ಕೂ, ಇದಕ್ಕೂ ಸಂಬಂಧ ಇಲ್ಲ. ಅವರು ದೆಹಲಿಯಲ್ಲಿ ಇದ್ದರು. ಅವರ ಕೆಲಸ ಅವರು ಮಾಡುತ್ತಾ ಇದ್ದಾರೆ" ಎಂದಿದ್ದಾರೆ.