ನವದೆಹಲಿ, ನ 17 (DaijiworldNews/MS): ಕಾಮಿಡಿಯನ್ ವೀರ್ ದಾಸ್ ಅಮೆರಿಕದಲ್ಲಿ ನಡೆದ ಸ್ಟಾಂಡಪ್ ಕಾಮಿಡಿಯೊಂದರಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್ರೇಪ್ ಮಾಡುತ್ತೇವೆ. ಭಾರತದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 900 ಇರುತ್ತೆ, ಆದರೂ ರಾತ್ರಿ ಆಕಾಶದಲ್ಲಿ ನಕ್ಷತ್ರ ನೋಡಲು ಬಯಸುತ್ತೇವೆ. ನಾವು ಪರಸ್ಪರರನ್ನು ಆಲಂಗಿಸುತ್ತೇವೆ, ಆದರೆ ಮಾಸ್ಕ್ ಧರಿಸಲ್ಲ’’ ಎಂದು ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ವೀರ್ ದಾಸ್ ಮಾತನಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆ ವಿಡಿಯೋದಲ್ಲಿ ಭಾರತವನ್ನು ಅವಮಾನ ಮಾಡಿದ್ದಕ್ಕೆ ನೆಟ್ಟಿಗರು, ನಟಿ ಕಂಗನಾ ರಣಾವತ್, ಬಿಜೆಪಿ ನಾಯಕ ಆದಿತ್ಯ ಜಾ ಅವರು ವೀರ್ ದಾಸ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪಾಲಘಾರ್ ಜಿಲ್ಲೆ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ಮುಂಬೈ ಹೈಕೋರ್ಟ್ ವಕೀಲ ಆಶುತೋಷ್ ದುಬೆ ದೂರು ನೀಡಿದ್ದಾರೆ. ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಸ್ಟೇಶನ್ನಲ್ಲಿ ವೀರ್ ದಾಸ್ ವಿರುದ್ಧ ದೂರು ದಾಖಲಾಗಿದೆ. ಅಮೆರಿಕನ್ನರ ಮುಂದೆ ಭಾರತದಲ್ಲಿರುವ ಸಮಸ್ಯೆ, ಒಳ್ಳೆಯ ಗುಣಗಳನ್ನು ಕೂಡ ವೀರ್ ದಾಸ್ ಹಂಚಿಕೊಂಡಿದ್ದಾರೆ.
ತಮ್ಮ ಹೇಳಿಕೆಯ ಕುರಿತಂತೆ ನೀಡಿರುವ ಸ್ಪಷ್ಟನೆಯಲ್ಲಿ ವೀರ್ ದಾಸ್, ಪ್ರತಿ ದೇಶಕ್ಕೂ ಕತ್ತಲು ಹಾಗೂ ಬೆಳಕಿನ ಎರಡು ಇದ್ದಂತೆ ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ. ಅದೇನು ರಹಸ್ಯವಾದ ವಿಷಯವಲ್ಲ. ಆ ಹೇಳಿಕೆಯಲ್ಲಿ ನಾವು ಯಾವುದಕ್ಕೆ ಶ್ರೇಷ್ಠರು ಎಂಬುದನ್ನು ಹೇಳುತ್ತಾ, ಎಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂಬುದನ್ನು ವಿಡಂಬನೆಯ ಮೂಲಕ ತಿಳಿಸಿದ್ದೆ ಎಂದಿದ್ದಾರೆ