ಬೆಂಗಳೂರು, ನ.17 (DaijiworldNews/PY): "ಬಿಟ್ ಕಾಯಿನ್ ದಂಧೆ ಎಂದರೆ ಯಾರಿಗೂ ಹೆದರಿಕೆ ಇಲ್ಲ. ಏಕೆಂದರೆ, ಇದನ್ನಾಗಲೇ ನಾವು ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿದ್ದಿ, ನಮ್ಮಲ್ಲಿ ಮುಚ್ಚಿಡುವುದೂ ಯಾವುದೂ ಇಲ್ಲ" ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಟ್ ಕಾಯಿನ್ ದಂಧೆ ಬಗ್ಗೆ ಇರುವ ಪುರಾವೆಗಳನ್ನು ಪ್ರತಿಪಕ್ಷಗಳು ತನಿಖಾ ಸಂಸ್ಥೆಗಳಿಗೆ ನೀಡಲಿ" ಎಂದು ಸವಾಲೆಸೆದಿದ್ದಾರೆ.
"ಬಿಟ್ ಕಾಯಿನ್ ದಂಧೆ ಪ್ರಗತಿಯಲ್ಲಿರುವ ತನಿಖೆ. ಪ್ರತಿಪಕ್ಷಗಳ ಇಲ್ಲಸಲ್ಲದ ಆರೋಪಗಳಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ಈ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಾ ರಕ್ಷಿಸುವ ಪ್ರಶ್ನೆಯೇ ಇಲ್ಲ" ಎಂದು ತಿಳಿಸಿದ್ದಾರೆ.
"ಸರ್ಕಾರಿ ಸೈಟ್ ಅನ್ನು ಹ್ಯಾಕ್ ಮಾಡಿಕೊಂಡಿರುವ ಬಗ್ಗೆ ಶ್ರೀಕಿ ಹೇಳಿಕೊಂಡಿದ್ದಾನೆ. ವಿಪಕ್ಷಗಳು ಮಾಡುತ್ತಿರುವ ಬಿಟ್ ಕಾಯಿನ್ ದಂಧೆ ಎನ್ನುವುದು ಒಂದು ಭೂತ ಬಂತು ಭೂತ ಎಂದು ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ. ಕಿಂಗ್ಪಿನ್ ಶ್ರೀಕಿಯನ್ನು ಬಿಟ್ ಕಾಯಿನ್ ಬಳಕೆಯಿಂದ ಮಾದಕವಸ್ತು ಕಳ್ಳಸಾಗಣೆ ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ" ಎಂದಿದ್ದಾರೆ.